ನಮ್ಮ ಬಾಲ್ಯದಲ್ಲಿ ನಮಗೆ ಅತ್ಯಂತ ಇಷ್ಟವಾದ ವಿಷಯವೆಂದರೆ 'ಗುಪ್ತನಿಧಿಯ' ಮೇಲಿನ ಕಥೆಗಳು. ಈ ಕಾರಣದಿಂದಲೇ ನಮಗೆ ಅರೇಬಿಯನ್ ನೈಟ್ಸ್ ಕಥೆಗಳು ಬಹು ಕುತೂಹಲಕಾರಿ ಹಾಗೂ ರೋಮಾಂಚನಕಾರಿಯಾಗಿ ಕಾಣುತ್ತಿದ್ದವು. ಅದರಲ್ಲಿ ಬರುವ ಅಲೀಬಾಬ ಮತ್ತು ನಲವತ್ತು ಮಂದಿ ಕಳ್ಳರು, ಅಲ್ಲಾವುದ್ದೀನನ ಅದ್ಬುತ ದೀಪ, ಹಾಗೂ ಸಿಂದಬಾದನ ಸಮುದ್ರ ಯಾತ್ರೆಗಳು ಮೂಲತಃ ಗುಪ್ತನಿಧಿಗೆ ಸಂಬಂಧಪಟ್ಟ ಕಥೆಗಳೇ ಆಗಿದ್ದವು. ಈ ಕಥೆಗಳ ವಿಶೇಷವೆಂದರೆ ಅದರಲ್ಲಿ ಬರುವ ಕಥಾನಾಯಕರೆಲ್ಲಾ ಸಾಮಾನ್ಯ ವರ್ಗಕ್ಕೆ ಸೇರಿದ ಹಾಗೂ ಪ್ರಾಮಾಣಿಕ ವ್ಯಕ್ತಿಗಳು ಅಥವಾ ಸಿಂದಬಾದನಂತಹ ಸಾಹಸಿಗಳು. ನಾವೂ ಕೂಡಾ ಸಾಮಾನ್ಯ ವರ್ಗಕ್ಕೆ ಸೇರಿದವರಾದ್ದರಿಂದ ನಮ್ಮನ್ನೂ ಕಥಾನಾಯಕನ ಪಾತ್ರದಲ್ಲಿ ಸುಲಭವಾಗಿ ತೊಡಗಿಸಿಕೊಂಡು ಗುಪ್ತನಿಧಿಯನ್ನು ಕಂಡು ಹಿಡಿದವರಂತೆ ಹಾಗೂ ಸಿಂದಬಾದನಂತೆ ಸಾಹಸಗಳಲ್ಲಿ ತೊಡಗಿದವರಂತೆ ಕನಸು ಕಾಣುತ್ತಿದ್ದೆವು. ಓಹ್! ಎಂತಹ ಬಾಲ್ಯ ನಮದಾಗಿತ್ತು?
ಈ ಕಥೆಗಳಲ್ಲದೇ ಗುಪ್ತನಿಧಿಗೆ ಸಂಬಂಧಿಸಿದ ಎಷ್ಟೋ ಬೇರೆ ಕಥೆಗಳನ್ನೂ ನಾವು ಕೇಳಿದ್ದೆವು. ಅವೆಲ್ಲವೂ ನಮಗಿಷ್ಟವಾದವೇ ಆಗಿದ್ದವು. ಆದರೆ ನಮಗಿಷ್ಟವಾದ ಒಂದು ಕಥೆ ಮಾತ್ರಾ ನಮ್ಮ ಕಿವಿಗೆ ಬೀಳುವ ಕಾಲ ಬಂದೇ ಇರಲಿಲ್ಲ . ನಮ್ಮ ತಂದೆ ಯಾವುದೇ ಕೈಗೆಟುಕದ ವಸ್ತುವಿನ ವಿಷಯ ಬಂದಾಗ ‘ದೇವರಯ್ಯನ ಗಂಟಿನಂತಾಯಿತು’ ಎನ್ನುತ್ತಿದ್ದರು. ಆದರೆ ಆ ಗಂಟಿನಬಗ್ಗೆ ಯಾವುದೇ ವಿವರ ನೀಡುತ್ತಿರಲಿಲ್ಲ. ಹಾಗಾಗಿ ನಮಗೆ ದೇವರಯ್ಯ ಓರ್ವ ನಿಗೂಢ ವ್ಯಕ್ತಿಯಾಗಿ ಹಾಗೂ ಅವರ ಗಂಟು ಒಂದು ಗುಪ್ತನಿಧಿಯಾಗಿ ಮನಸ್ಸಿನಲ್ಲಿ ಉಳಿದು ಬಿಟ್ಟಿತ್ತು. ಆದರೆ ನಮ್ಮ ತಂದೆ ನಮ್ಮ ಕುತೂಹಲವನ್ನು ತಣಿಸುವ ಪ್ರಯತ್ನ ಮಾಡದೇ ಕಥೆಯನ್ನು ತಮ್ಮೊಳಗೇ ಬಚ್ಚಿಟ್ಟುಕೊಂಡು ಬಿಟ್ಟಿದ್ದರು!
ಇನ್ನೊಂದು ಕುತೂಹಲಕಾರಿ ವಿಷಯ ದೇವರಯ್ಯ ಎಂಬ ಹೆಸರೇ ಆಗಿತ್ತು. ಖಂಡಿತವಾಗಿಯೂ ಅದೊಂದು ವಿಸ್ಮಯಕಾರೀ ಹೆಸರಾಗಿತ್ಟೆಂಬುವುದರಲ್ಲಿ ಅನುಮಾನವಿರಲಿಲ್ಲ. ಏಕೆಂದರೆ ನನಗೆ ನೆನಪಿದ್ದಂತೆ ಒಂದು ಬಾರಿ ನಮ್ಮ ತಂದೆ ಬೆಳಿಗ್ಗೆ ಎದ್ದವರೇ ಕೂಳೂರು 'ದೇವರನ್ನು' ನೋಡಿ ಬರುತ್ತೇನೆಂದು ಮನೆಯಿಂದ ಹೊರಟುಬಿಟ್ಟರು. ಸ್ವಾಭಾವಿಕವಾಗಿ ನಾವೆಲ್ಲಾ ಅವರು ವಾಪಾಸ್ ಬರುವಾಗ 'ದೇವರ' ಪ್ರಸಾದಕ್ಕೆ ಕಾಯುತ್ತಾ ಇದ್ದೆವು. ಆದರೆ ಬರಿಗೈನಲ್ಲಿ ಬಂದ ಅವರನ್ನು ನೋಡಿ ನಮಗೆಲ್ಲಾ ಆಶ್ಚರ್ಯವಾಯಿತು. ನಮ್ಮ ತಂದೆಗೆ ನಮ್ಮ ಅನಿಸಿಕೆಯನ್ನು ತಿಳಿದು ಬಂದ ನಗೆ ಅಷ್ಟಿಷ್ಟಲ್ಲ. ಅವರು ಅದೊಬ್ಬ ಮನುಷ್ಯನ ಹೆಸರೆಂದಾಗ ನಮಗಾದ ಆಶ್ಚರ್ಯವೂ ಅಷ್ಟಿಷ್ಟಲ್ಲ. ಒಬ್ಬ ಮನುಷ್ಯನ ಹೆಸರನ್ನು ದೇವರೆಂದು ಇಡಲು ಕಾರಣ ಮಾತ್ರ ನಮಗೆ ಹೊಳೆಯಲೇ ಇಲ್ಲ.
ನಮ್ಮ ತಂದೆ ನಮಗೆ ದೇವರಯ್ಯನ ಕಥೆಯನ್ನು ಹೇಳದಿರಲು ಅವರದ್ದೇ ಆದ ಕೆಲವು ಕಾರಣಗಳಿದ್ದುವು.
ಅವರ ಮುಖ್ಯ ಸಮಸ್ಯೆ ಎಂದರೆ ವಿಷಯಾಂತರ. ಅವರು ಯಾವುದೇ ಕಥೆ ಹೇಳುತ್ತಿರುವಾಗ ಇದ್ದಕ್ಕಿದ್ದಂತೆ ಬೇರೆ
ಯಾವುದೋ ಪ್ರಸಂಗಕ್ಕೆ ಹಾರಿಬಿಡುತ್ತಿದ್ದರು. ಹಾಗಾಗಿ ಮೂಲ ಕಥೆಗೆ ವಾಪಸ್ ಬರುವುದು ಎಷ್ಟೋ ಬಾರಿ ಸಾಧ್ಯವಾಗುತ್ತಿರಲಿಲ್ಲ. ಉದಾಹರಣೆಗೆ ಅವರು ನಮಗೆ ಎಷ್ಟೋ ಬಾರಿ ಗಣಪತಿಕಾಳಯ್ಯ ಎಂಬ
ವ್ಯಕ್ತಿಯ ಕಥೆಯನ್ನು ಹೇಳಲು ಪ್ರಯತ್ನಿಸುತ್ತಿದ್ದರು. ಆದರೆ ಪ್ರತೀ ಬಾರಿಯೂ ಕಥೆ ಅರ್ಧಕ್ಕೇ ನಿತ್ತು
ಹೋಗುತ್ತಿತ್ತು. ಅವರ ಇಡೀ ಜೀವಮಾನದಲ್ಲಿ ಆ ಕಥೆ ಮುಕ್ತಾಯ ಕಾಣಲೇ ಇಲ್ಲ!
ಆದರೆ ಎಲ್ಲಾ ತಂದೆಯರಂತೆ ನಮ್ಮಪ್ಪನಿಗೂ ತನ್ನ ಮಕ್ಕಳಮೇಲೆ ಅತಿ ಪ್ರೀತಿಯಿತ್ತು. ಯಾವುದೇ
ವಿಷಯದಲ್ಲಿ ಮಕ್ಕಳ ನಿರಾಶೆಯನ್ನು ಸಹಿಸಲಾಗುತ್ತಿರಲಿಲ್ಲ. ಹಾಗಾಗಿ ಅವರು ಒಮ್ಮೆ ತುಂಬಾ ಖುಷಿಯಲ್ಲಿದ್ದಾಗ
ನಾವು ಕೇಳಿಕೊಂಡಂತೆ ದೇವರಯ್ಯನ ಗಂಟಿನ ಕಥೆಯನ್ನು ಹೇಳಲು ಪ್ರಾರಂಬಿಸಿಯೇ ಬಿಟ್ಟರು!
o------o-----o-----o---
-----o------o-------o-----o------o------o-------o------o------o--
ಒಂದು ಕಾಲದಲ್ಲಿ ನಮ್ಮ ಮನೆಯ ಪಕ್ಕದ ಮನೆಯಲ್ಲೇ ವಾಸವಾಗಿದ್ದ ಓರ್ವ ದಂಪತಿಗಳಿಗೆ ಬಹು ಕಾಲ
ಮಕ್ಕಳೇ ಆಗಿರಲಿಲ್ಲ. ಹಾಗೇ ಎಷ್ಟೋ ವರ್ಷಗಳು ಕಳೆದನಂತರ ಒಮ್ಮೆ ಈ ದಂಪತಿಗಳು ಶೃಂಗೇರಿಗೆ ಹೋಗಿ ಚಂದ್ರಮೌಳೇಶ್ವರನ
ಅರ್ಚನೆ ಮಾಡಿದರು. ಹಾಗೂ ಶೃಂಗೇರಿಯ ಆಗಿನ ಜಗದ್ಗುರುಗಳನ್ನು
ಬೇಟಿ ಮಾಡಿ ಅವರ ಆಶೀರ್ವಾದವನ್ನು ಪಡೆದರು.
ಚಂದ್ರಮೌಳೇಶ್ವರನ ಕೃಪೆಯಿಂದ ದಂಪತಿಗಳಿಗೆ ಶೀಘ್ರದಲ್ಲಿಯೇ ಒಂದು ಗಂಡು ಮಗು ಜನಿಸಿಬಿಟ್ಟಿತು.
ದಂಪತಿಗಳ ಸಂತೋಷಕ್ಕೆ ಮಿತಿಯೇ ಇಲ್ಲದಂತಾಯಿತು. ಮಗುವಿನ ನಾಮಕರಣಕ್ಕೆ ಮುಂಚೆ ದಂಪತಿಗಳು ಪುನಃ ಶೃಂಗೇರಿಗೆ
ಹೋಗಿ ಚಂದ್ರಮೌಳೇಶ್ವರನ ಹಾಗೂ ಗುರುಗಳ ದರ್ಶನ ಮಾಡಿದರು. ಹಾಗೆಯೇ ಗುರುಗಳ ಹತ್ತಿರ ಮಗುವಿಗೆ ಒಂದು
ಹೆಸರು ಸೂಚಿಸುವಂತೆ ಪ್ರಾರ್ಥಿಸಿದರು. ಇಂತಹ ಬೇಡಿಕೆ
ಗುರುಗಳಿಗೆ ಯಾವತ್ತೂ ಬಂದಿರಲಿಲ್ಲ. ಅವರು ದಂಪತಿಗಳಿಗೆ ಮಗುವಿಗೆ ಯಾವುದಾದರೂ ‘ದೇವರ’ ಹೆಸರಿಡುವಂತೆ ಸೂಚಿಸಿದರು.
ವಾಡಿಕೆಯಂತೆ ಶೃಂಗೇರಿಯ ಜಗದ್ಗುರುಗಳು ಯಾವಾಗಲೂ ಮೆಲುದ್ವನಿಯಲ್ಲೇ ಸಂಭಾಷಣೆ ಮಾಡುವರು.
ಹಾಗಾಗಿ ದಂಪತಿಗಳಿಗೆ ಅದು ಪೂರ್ತಿಯಾಗಿ ಕಿವಿಗೆ ಬೀಳಲಿಲ್ಲ. ಅಂತೆಯೇ ಅವರು ಗುರುಗಳು ಮಗನಿಗೆ 'ದೇವರು' ಎಂದು ಹೆಸರಿಡಲು ಹೇಳಿದರೆಂದು ತೀರ್ಮಾನಿಸಿಬಿಟ್ಟರು!
ಅವರು ಭಕ್ತಿ ಪೂರ್ವಕವಾಗಿ ಮಗನಿಗೆ 'ದೇವರು' ಎಂದು ನಾಮಕರಣ ಮಾಡಿಬಿಟ್ಟರು! ಈ ಹೆಸರೇ ಮುಂದೆ ಹೆಬ್ಬಾರ
ಸಮಾಜದ ದೇವರಯ್ಯ ಎಂಬ ಹೆಸರಿನ ಮೂಲವಾಯಿತು! ಅಷ್ಟೇ ಅಲ್ಲ ಶೃಂಗೇರಿಯ ಜಗದ್ಗುರುಗಳೇ ಸೂಚಿಸಿದರೆಂಬ ಸಮಾಚಾರ ಕೂಡಾ ಎಲ್ಲಾ ಕಡೆ ಹರಡಿ ಈ ಹೆಸರನ್ನಿಡುವ
ಸಂಪ್ರದಾಯವೇ ಪ್ರಾರಂಬವಾಯಿತು! ಆದರೆ ಯಾರೂ ಗುರುಗಳ ಹತ್ತಿರ ಸತ್ಯಾಂಶ ತಿಳಿಯಲು ಪ್ರಯತ್ನಿಸಲೇ ಇಲ್ಲ! ಅಷ್ಟು ಮಾತ್ರವಲ್ಲ. ಈ ಹೆಸರಿನ ಹಿಂದೆ ಬೇರೆ ಹೆಸರನ್ನು ಸೇರಿಸಿ ಕೃಷ್ಣದೇವರು, ಪುಟ್ಟದೇವರು ಇತ್ಯಾದಿ ಹೆಸರನ್ನಿಡುವುದೂ ಒಂದು ಸಂಪ್ರದಾಯವೇ ಆಗಿಬಿಟ್ಟಿತು!
ಇಷ್ಟು ಹೇಳಿ ನಮ್ಮ ತಂದೆಯವರು ಕಥೆಯನ್ನು ಒಂದು ಘಟ್ಟಕ್ಕೆ ತಲುಪಿಸಿದರು. ದೇವರಯ್ಯ ಎಂಬ
ಹೆಸರಿನ ಮೂಲ ನಮಗೆ ಮೊದಲ ಬಾರಿಗೆ ಗೊತ್ತಾಗಿ ವಿಸ್ಮಯವಾಯಿತು. ಹಾಗೆಯೇ ಕಥೆಯ ಮುಂದಿನ ಭಾಗದಬಗ್ಗೆ
ಕುತೂಹಲ ಬೆಳೆಯಿತು. ದೇವರಯ್ಯನ ಗಂಟಿನ ಬಗ್ಗೆ ನಮ್ಮ ಕೌತುಕ ಮುಗಿಲುಮುಟ್ಟಿತು. ಆದರೆ ಅಷ್ಟರಲ್ಲಿ
ನಮ್ಮ ಅದೃಷ್ಟ ಕೈ ಕೊಟ್ಟಿತ್ತು. ನಮ್ಮ ತಂದೆಯವರು ಯಥಾಪ್ರಕಾರ ಬೇರೆ ವಿಷಯಕ್ಕೆ ಹಾರಿಬಿಟ್ಟಿದ್ದರು!
ಅವರನ್ನು ವಾಪಸ್ ತರಿಸುವ ನಮ್ಮ ಪ್ರಯತ್ನಗಳೆಲ್ಲಾ ವಿಫಲವಾದವು!
o------o-----o-----o---
-----o------o-------o-----o------o------o-------o------o------o--
ನಮ್ಮ ತಂದೆಯವರನ್ನು ಪುನಃ ಕಥೆ ಹೇಳುವಂತೆ ಮಾಡಲು ನಾವು ಭಗೀರಥ ಪ್ರಯತ್ನ ಮಾಡಬೇಕಾಯಿತು.
ಆದರೆ ನಮಗೆ ದೇವರಯ್ಯನ ಗಂಟಿನ ರಹಸ್ಯ ತಿಳಿಯಬೇಕೆಂಬ ಕುತೂಹಲ ತಣಿಯಲೇ ಇಲ್ಲ . ಕೊನೆಗೂ ಒಂದು ದಿನ
ನಮ್ಮ ತಂದೆ ನಮ್ಮ ಒತ್ತಾಯಕ್ಕೆ ಮಣಿದು ಕಥೆಯನ್ನು ಮುಂದುವರಿಸಿದರು:
ತಂದೆತಾಯಿಗಳ ಏಕೈಕ ಮುದ್ದಿನ ಮಗನಾಗಿ ಬೆಳೆದ ದೇವರಯ್ಯ ಬೇಗನೆ ನವತಾರುಣ್ಯವನ್ನು ತಲುಪಿಬಿಟ್ಟ.
ಹಣಕಾಸಿನ ವಿಷಯದಲ್ಲಿ ಅತ್ಯಂತ ಪರಿಣಿತನಾಗಿ ಅಪ್ಪನ ಆಸ್ತಿಯನ್ನು ಬೆಳೆಸಿ ಊರಿಗೇ ದೊಡ್ಡ ಶ್ರೀಮಂತನಾಗಿ
ಪ್ರಸಿದ್ದಿ ಗಳಿಸಿದ. ಆದರೆ ಅವನಿಗೆ ಮದುವೆಯಾಗುವಬಗ್ಗೆ ಏಕೋ ಆಸಕ್ತಿಯೇ ಇರಲಿಲ್ಲ. ಇದು ಅವನ ತಾಯಿತಂದೆಗಳ
ನಿರಾಶೆಗೆ ಕಾರಣವಾಯಿತು. ಆದರೆ ದೇವರಯ್ಯನಿಗೆ ಹಣವನ್ನು ಬಿಟ್ಟರೆ ಬೇರೆಯಾವುದೇ ಆಸಕ್ತಿಗಳಿರಲಿಲ್ಲ.
ದೇವರಯ್ಯನ ಐಶ್ವರ್ಯ ಬೆಳೆಯುತ್ತಲೇ ಹೋಯಿತು. ಕೇವಲ ಮನೆ ಜಮೀನು ಮಾತ್ರವಲ್ಲದೇ ಅವನ ಹತ್ತಿರ
ನಗದು ಮತ್ತು ಚಿನ್ನದ ಭಂಡಾರವೇ ದೊಡ್ಡದಾಗಿ ಬೆಳೆಯಿತು. ಅದನ್ನು ಸುರಕ್ಷಿತವಾಗಿ ಇಡುವುದೇ ಒಂದು ದೊಡ್ಡ
ಸಮಸ್ಯೆಯಾಯಿತು. ಆಗಿನ ಕಾಲದಲ್ಲಿ ಬ್ಯಾಂಕುಗಳಲ್ಲಿ ಹಣವಿಡುವ ಪರಿಪಾಟವೇ ಇರಲಿಲ್ಲ. ಅಲ್ಲದೇ ಬ್ಯಾಂಕುಗಳು
ದೊಡ್ಡ ಊರುಗಳಲ್ಲಿ ಮಾತ್ರಾ ಇರುತ್ತಿದ್ದವು. ಹಾಗಾಗಿ ದೇವರಯ್ಯನಿಗೆ ಪುರಾತನ ಕಾಲದ ಕ್ರಮದಂತೆ ಹೊನ್ನನ್ನು
ಮಡಿಕೆಯಲ್ಲಿ ಹಾಕಿ ಹೂತಿಡುವ ಪರಿಸ್ತಿತಿ ಬಂದುಬಿಟ್ಟಿತು. ಹಾಗೂ ಆ ಕ್ರಮವೇ ಅವನ ಸಮಸ್ಯೆಗಳ ಮೂಲವಾಯಿತು.
ತನ್ನಲ್ಲಿದ್ದ ನಗದು ಹಣವನ್ನೆಲ್ಲಾ ಚಿನ್ನ ಮತ್ತು ಬೆಳ್ಳಿ ನಾಣ್ಯಗಳಾಗಿ ಪರಿವರ್ತಿಸಿದ
ದೇವರಯ್ಯ ಅದನ್ನು ದೊಡ್ಡ ತಾಮ್ರದ ಕೊಡದೊಳಗೆ ಹಾಕಿ ಮುಚ್ಚಳ ಹಾಕಿಬಿಟ್ಟು ತನ್ನ ಮನೆಯ ಹಿಂದೆ ನೆಲದಲ್ಲಿ
ಹೂತುಬಿಟ್ಟ . ತಾನು ಹುಗಿಯುತ್ತಿರುವುದು ಯಾರ ಕಣ್ಣಿಗೂ ಬೀಳದಂತೆ ಮಧ್ಯ ರಾತ್ರಿ ಹೊತ್ತಿನಲ್ಲಿ ಪೂರ್ತಿ
ಕೆಲಸ ಮುಗಿಸಬೇಕಾಯಿತು. ತನ್ನ ಬುದ್ದಿವಂತಿಕೆಗೆ ತುಂಬಾ
ಹೆಮ್ಮೆಪಟ್ಟ ಅವನಿಗೆ ಸಂಪೂರ್ಣ ನೆಮ್ಮದಿ ಸಿಕ್ಕಿ
ಆ ರಾತ್ರಿ ಚೆನ್ನಾಗಿ ನಿದ್ದೆಯೂ ಬಂತು.
ಆದರೆ ಆ ನೆಮ್ಮದಿ ಕೇವಲ ಕ್ಷಣಿಕವಾಗಿತ್ತೆಂದು ಸ್ವಲ್ಪ ಕಾಲದಲ್ಲೇ ಅರಿವಾಯಿತು. ತನ್ನ ಗುಪ್ತನಿಧಿಯನ್ನು
ಯಾರೋ ರಾತ್ರಿವೇಳೆ ಅಗೆದು ತೆಗೆಯುತ್ತಿರುವಂತೆ ದೇವರಯ್ಯನಿಗೆ ಆಗಾಗ ಕನಸು ಬೀಳತೊಡಗಿತು. ಇದಲ್ಲದೇ
ಇನ್ನೊಂದು ಸಮಸ್ಯೆಯೂ ಎದುರಾಯಿತು. ಆಗಿನ ಕಾಲದ ಎಲ್ಲಾ ಶ್ರೀಮಂತರಂತೆ ದೇವರಯ್ಯನಿಗೂ ತನ್ನಲ್ಲಿರುವ
ಹಣವನ್ನು ಆಗಾಗ ಎಣಿಸಿ ನೋಡುವ ಅಭ್ಯಾಸವಿತ್ತು. ಆದ್ದರಿಂದ
ಅವನು ಆಗಾಗ ಭೂಮಿಯನ್ನು ಅಗೆದು ಕೊಡದಲ್ಲಿದ್ದ ನಾಣ್ಯಗಳ ಮರುಎಣಿಕೆ ಮಾಡತೊಡಗಿದ. ಈ ಕೆಲಸವನ್ನು ಅವನು
ರಾತ್ರಿವೇಳೆ ಗುಪ್ತವಾಗಿ ಮಾಡಬೇಕಾಗಿತ್ತು. ತಾನು ಮಾಡುತ್ತಿರುವ ಕೆಲಸ ಯಾರಾದರೂ ನೋಡಿ ಬಿಟ್ಟಾರೆಂಬ
ಭಯ ಬೇರೆ. ಒಟ್ಟಿನಲ್ಲಿ ಈ ಕಾರ್ಯಕ್ರಮ ಅವನ ರಕ್ತದ ಒತ್ತಡವನ್ನು ಅತಿಯಾಗಿ ಏರುವಂತೆ ಮಾಡಿತು.
ಒಂದುದಿನ ದೇವರಯ್ಯನಿಗೆ ಯಾರೋ ಕೆಲವರು ಹಣವನ್ನು ನೆಲದಲ್ಲಿ ಹುಗಿದಿಡುವ ಶ್ರೀಮಂತರ ವಿಷಯ
ಮಾತನಾಡುವುದು ಕಿವಿಗೆ ಬಿತ್ತು. ಅವನು ಗುಟ್ಟಾಗಿ ಅವರ ಮಾತನ್ನು ಕೇಳತೊಡಗಿದ . ಅವರಲ್ಲೊಬ್ಬನ ಪ್ರಕಾರ
ಕಳ್ಳರು ಶ್ರೀಮಂತರ ದಿನಚರ್ಯೆಯನ್ನು ಸೂಕ್ಷ್ಮವಾಗಿ ಗಮನಿಸುವುದರ
ಮೂಲಕ ಅವರು ಗಂಟನ್ನೆಲ್ಲಿ ಹುಗಿದಿಟ್ಟಿರಬಹುದೆಂದು ಕಂಡು ಹಿಡಿಯಬಲ್ಲರು. ಆದರೆ ಶ್ರೀಮಂತರು ಅದಕ್ಕೆ
ವಿರುದ್ದವಾದ ತಂತ್ರದ ಮೂಲಕ ಕಳ್ಳರಿಗೆ ಟೋಪಿ ಹಾಕುತ್ತಿದ್ದರು . ಅದೊಂದು ಸುಲಭವೆನಿಸುವ ತಂತ್ರವಾಗಿತ್ತು.
ಅದೇನೆಂದರೆ ಕೆಲವು ಖಾಲಿ ಕೊಡಗಳಲ್ಲಿ ಕಲ್ಲು ತುಂಬಿ ಅಲ್ಲಲ್ಲಿ ಹೂತುಬಿದುವುದು. ನಿಜವಾಗಿ ಹೊನ್ನು
ತುಂಬಿದ ಕೊಡವನ್ನು ತನಗೆ ಮಾತ್ರಾ ಗೊತ್ತಾಗುವಂತೆ ಒಂದು ವಿಶೇಷ ಜಾಗದಲ್ಲಿ ಹೂತಿಡುವದು. ದೇವರಯ್ಯನಿಗೆ ಈ ತಂತ್ರ ಮನಸ್ಸಿಗೆ ತುಂಬಾ ಹಿಡಿಸಿತು. ತಾನೂ ಅದನ್ನೇ ಏಕೆ ಅನುಕರಣೆ ಮಾಡಬಾರದು
ಎಂದೂ ಅನಿಸಿತು.
ಸ್ವಲ್ಪವೂ ತಡಮಾಡದೆ ದೇವರಯ್ಯ ಮಾರನೆ ದಿನವೇ ಪೇಟೆಗೆ ಹೋಗಿ ಎಂಟು-ಹತ್ತು ತಾಮ್ರದ ಕೊಡಗಳನ್ನು
ಖರೀದಿಸಿದ. ಆ ರಾತ್ರಿಯೇ ಅವುಗಳಲ್ಲೆಲ್ಲಾ ಕಲ್ಲು ಹರಳುಗಳನ್ನು ತುಂಬಿಸಿ ಮುಚ್ಚುಳ ಹಾಕಿ ತನ್ನ ಮನೆಯ
ಹಿಂದೆ ಬೇರೆಬೇರೆ ಜಾಗಗಳಲ್ಲಿ ಹೂತುಬಿಟ್ಟ. ಅಷ್ಟು ಮಾಡಿದಮೇಲೆ ಅವನ ಮನಸ್ಸಿಗೆ ನೆಮ್ಮದಿಯಾಯಿತು.
ಇನ್ನು ತನ್ನ ಗುಪ್ತನಿಧಿ ಯಾರ ಕಣ್ಣಿಗೂ ಬೀಳಲಿಕ್ಕಿಲ್ಲ. ಯಾವ ಕಳ್ಳನಾದರೂ ನೆಲ ಅಗೆದರೆ ಅವನಿಗೆ ಸಿಗುವುದು
ಕೇವಲ ಕಲ್ಲು ತುಂಬಿದ 'ಚೆಂಬು' ಮಾತ್ರ ಎಂದು ಯೋಚಿಸಿ ಅವನಿಗೆ ಒಳಗೊಳಗೇ ನಗೆಯೂ ಬಂತು!
ಈ ತಂತ್ರವನ್ನು ಕಂಡುಹಿಡಿದ ಬುದ್ಧಿವಂತನಿಗೆ ಮನದಲ್ಲೇ
ಸಾವಿರ ನಮಸ್ಕಾರ ಕೂಡಾ ಮಾಡಿಬಿಟ್ಟ!
ಆಮೇಲೆ ಕೆಲದಿನಗಳವರೆಗೆ ದೇವರಯ್ಯನನ್ನು ಹಿಡಿಯುವರೇ ಇರಲಿಲ್ಲ. ಬಹುಮುಖ್ಯವಾದ ಸಮಸ್ಯೆ
ಬಗೆಹರಿದುದು ಅವನ ಜೀವನ ಶೈಲಿಯೇ ಬದಲಾಗುವಂತೆ ಮಾಡಿತು. ಅದು ಎಷ್ಟೆಂದರೆ ಅವನಿಗೆ ತಾನು ಮದುವೆಯಾಗಬೇಕೆಂಬ
ಆಸೆಯನ್ನೂ ಹುಟ್ಟುವಂತೆ ಮಾಡಿತು. ವಿಷಯ ತಿಳಿದ ಹೆಣ್ಣು ಹಡೆದವರು ಜಾತಕಗಳೊಂದಿಗೆ ಹಾಜರಾಗತೊದಗಿದರು.
ಆದರೆ ಅದಕ್ಕೆಲ್ಲಾ ಒಮ್ಮೆಯೇ ತಡೆ ಬಂದಿತು. ಅದಕ್ಕೆ ಕಾರಣ ದೇವರಯ್ಯನಿಗೆ ಪುನಹ ಒಮ್ಮೆ ತನ್ನ ಹೊನ್ನನ್ನು
ಎಣಿಸಿ ನೋಡಬೇಕೆಂದು ಚಪಲ.
ಅದೊಂದು ಕಾಳರಾತ್ರಿ. ದೇವರಯ್ಯನಿಗೆ ಇದ್ದಕ್ಕಿದ್ದಂತೆ ತನ್ನ ಹೊನ್ನಿನ ಕುಡಿಕೆಯ ಹಣವನ್ನು
ಮರುಎಣಿಕೆ ಮಾಡಬೇಕೆಂಬ ಹಠ ಬಂದು ಬಿಟ್ಟಿತು. ಕೊನೆಗೂ ಚಪಲ ತಡೆಯಲಾರದೇ ಅವನು ಮನೆಯ ಹಿಂಬಾಗಕ್ಕೆ ಹೋಗಿ
ತಾನು ಹಿಂದೆ ಹುಗಿದುಹಾಕಿದ್ದ ನಿಧಿಗಾಗಿ ಅಗೆಯ ತೊಡಗಿದನು. ಸ್ವಲ್ಪ ಹೊತ್ತಿನಲ್ಲೇ ತಾಮ್ರದ ಕೊಡವನ್ನು
ಹೊರಗೆ ತೆಗೆದೂ ಬಿಟ್ಟನು. ಆದರೆ ಅದರ ಮುಚ್ಚುಳ ತೆಗೆದು ನೋಡಿದಾಗ ಅವನಿಗೆ ಬರಸಿಡಿಲು ಹೊಡೆದಂತಾಯಿತು!
ಅದರಲ್ಲಿ ಅವನ ಕಣ್ಣಿಗೆ ಬಿದ್ದುದು ಕೇವಲ ಕಲ್ಲು ಹರಳುಗಳು ಮಾತ್ರಾ! ಖಂಡಿತ ಎಲ್ಲೋ ದೊಡ್ಡ ತಪ್ಪಾಗಿತ್ತು.
ತನ್ನ ಮನಸ್ಸನ್ನು ಸ್ತಿಮಿತಕ್ಕೆ ತಂದುಕೊಂಡ ದೇವರಯ್ಯ ನಿಧಾನವಾಗಿ ಹಾಗೂ ಶಾಂತವಾಗಿ ಯೋಚಿಸತೊಡಗಿದ.
ಅವನಿಗೆ ತಾನು ನಿಜವಾಗಿ ಹೂತಿಟ್ಟ ನಿಧಿಯ ಜಾಗದ ಬಗ್ಗೆ ಯಾವುದೇ ಅನುಮಾನವಿರಲಿಲ್ಲ. ಆದರೂ ಕೂಡಾ ಅವನು
ತಾನು ಆಮೇಲೆ ಕಳ್ಳರಿಗೆ ಟೋಪಿಹಾಕಲು ಹುಗಿದ ಗಂಟುಗಳಲ್ಲೊಂದನ್ನು ತಪ್ಪಾಗಿ ಅಗೆದಿರುವ ಸಾಧ್ಯತೆ ಇದ್ದೇ
ಇತ್ತು. ಅದನ್ನು ಕಂಡು ಹಿಡಿಯಲು ಅವನು ಪುನಃ ಅಗೆಯತೊಡಗಿದ. ಆದರೆ ಅವನ ದುರಾದೃಷ್ಟಕ್ಕೆ ಅವನು ಅಗೆದಲ್ಲೆಲ್ಲಾ
ಕಲ್ಲು ತುಂಬಿದ ಕೊಡಗಳೇ ಸಿಗತೊದಗಿದವು! ಹಾಗೇ ಅಗೆಯುತ್ತಾ ಅಗೆಯುತ್ತಾ ತಾನು ಹಿಂದೆ ಹುಗಿದಿದ್ದ ಎಲ್ಲಾ
ಕೊಡಗಳನ್ನೂ ಹೊರತೆಗೆದು ನೋಡಿಬಿಟ್ಟ. ಆದರೆ ಎಲ್ಲಾ ಕೊಡಗಳಲ್ಲಿ ಕಂಡದ್ದು ಕೇವಲ ಕಲ್ಲು ಹರಳುಗಳನ್ನು
ಮಾತ್ರಾ! ದೇವರಯ್ಯನ ಜೀವಮಾನದ ಸಂಪೂರ್ಣ ಐಶ್ವರ್ಯ ಭೂತಾಯಿಯ
ಗರ್ಭದಲ್ಲಿ ಮಾಯವಾಗಿ ಬಿಟ್ಟಿತ್ತು.
ದೇವರಯ್ಯನಿಗೆ ಸ್ವಲ್ಪ ಕಾಲದಲ್ಲೇ ಹುಚ್ಚು ಹಿಡಿದು ಬಿಟ್ಟಿತು.
ಊರಿನ ಜನಗಳಿಗೆ ಅವನು ಮನೆಯ ಹಿಂಭಾಗದಲ್ಲಿ ಅಲ್ಲಲ್ಲಿ ಅಗೆಯುತ್ತಿರುವ ದೃಶ್ಯ ಕಣ್ಣಿಗೆ ಬೀಳುತ್ತಿತ್ತು.
ಅವನು ತನ್ನ ಹುಗಿದಿಟ್ಟ ನಿಧಿಯಬಗ್ಗೆ ಏನನ್ನೋ ಹೇಳುತ್ತಿರುವುದು ಊರಿನಲ್ಲಿ ಒಂದು ದೊಡ್ಡ ಸಮಾಚಾರವಾಗಿ
ಬಿಟ್ಟಿತು. ಜನರಿಗೆ ದೇವರಯ್ಯನ ಗಂಟಿನ ಬಗ್ಗೆ ಅವರಿಗೆ ತೋಚಿದ ಕಥೆಯನ್ನು ಹೆಣೆಯುವುದೇ ಒಂದು ವೃತ್ತಿಯಾಯಿತು.
ಆ ಕಥೆ ಕೊನೆ ಕಂಡದ್ದು ದೇವರಯ್ಯನ ಮರಣದ ನಂತರವೇ. ಆ ಗಂಟು ದೇವರಯ್ಯನಿಗಾಗಲೀ ಬೇರೆ ಯಾರಿಗಾಗಲೀ ಕೊನೆಗೂ ಕಣ್ಣಿಗೆ ಬೀಳಲೇ
ಇಲ್ಲ.
ನಮ್ಮ ತಂದೆ ಇಲ್ಲಿಗೆ ಕಥೆಯನ್ನು ಮುಗಿಸಿದರು. ಅವರು ಈ ಸತ್ಯಕಥೆಯನ್ನು ಅವರ ಬಾಲ್ಯದಲ್ಲಿ ಹಿರಿಯರಿಂದ ಕೇಳಿ ತಿಳಿದಿದ್ದರು. ಆದರೆ ಅವರ ಮನಸ್ಸಿಗೆ ಒಂದಂತೂ ನಿಶ್ಚಿತವಾಗಿ ತಿಳಿದಿತ್ತು.
ಅದೆಂದರೆ ದೇವರಯ್ಯನ ಮೂಲ ಗುಪ್ತನಿಧಿ ಅವನ ಮನೆಯ ಹಿಂದೆಲ್ಲೋ ಖಂಡಿತವಾಗಿಯೂ ಅಡಗಿತ್ತು. ದೇವರಯ್ಯನ
ತಂತ್ರಗಾರಿಕೆಯೇ ಅವನನ್ನು ಅತಂತ್ರನನ್ನಾಗಿ ಮಾಡಿ ಗುಪ್ತನಿಧಿಯನ್ನು ಮಾಯ ಮಾಡಿತ್ತು ಅಷ್ಟೇ.
o------o-----o-----o---
-----o------o-------o-----o------o------o-------o------o------o--
ನಮ್ಮ ತಂದೆಯವರು ೧೯೮೦ ರಲ್ಲಿ ಇಹಲೋಕವನ್ನು ತ್ಯಜಿಸಿದರು.
ದೇವರಯ್ಯನು ಒಂದು ಕಾಲದಲ್ಲಿ ವಾಸವಾಗಿದ್ದ ಮನೆಯಲ್ಲಿ
ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ಸಂಸಾರಗಳು ವಾಸಮಾದುತ್ತಿದ್ದು ಕೊನೆಗೆ ನಮ್ಮ ಕಾಲದಲ್ಲಿ
ಆ ಮನೆ ನಮಗೆ ಸಂಬಂಧಪಟ್ಟ ಒಂದು ಸಂಸಾರದ ವಶಕ್ಕೆ ಬಂದಿತು.
ಆದರೆ ಮನೆಯಲ್ಲಿ ಯಾವುದೇ ಬದಲಾವಣೆಯಾಗದೆ ಮೂಲಮನೆ
ಹಾಗೆಯೇ ಉಳಿದಿತ್ತು.
ನಮ್ಮ ತಂದೆಯವರು ತೀರಿಕೊಂಡ ಸುಮಾರು ೧೦ ವರ್ಷಗಳ ನಂತರ
ಆ ಮನೆಯಲ್ಲಿದ್ದವರು ಹಳೇ ಮನೆಯನ್ನು ಕೀಳಿಸಿ ಹೊಸತನ್ನು ಕಟ್ಟಬೇಕೆಂದು ತೀರ್ಮಾನಿಸಿದರು. ಅದರಂತೆ
ಒಂದು ದಿನ ಇಡೀ ಮನೆಯನ್ನು ಕಿತ್ತುಹಾಕಲಾಯಿತು. ಹೊಸಮನೆಯನ್ನು ಕಟ್ಟಲೋಸುಗ ಮನೆಯ ಸುತ್ತಮುತ್ತ ಅಗೆಯಲಾಯಿತು.
ಆಗ ಇದ್ದಕ್ಕಿದ್ದಂತೆ ಒಂದು ಸಮಾಚಾರ ಊರಲ್ಲೆಲ್ಲಾ ಹರಡತೊಡಗಿತು.
ಅದರ ಪ್ರಕಾರ ಮನೆಯ ಪಕ್ಕದಲ್ಲಿ ಅಗೆಯುತ್ತಿರುವಾಗ ಆಳುಗಳಿಗೆ ಒಂದು ಗುಪ್ತನಿಧಿಯಿದ್ದ ತಾಮ್ರದ ಕೊಡ
ಸಿಕ್ಕಿ ಅವರು ಅದನ್ನು ಮನೆಯವರ ವಶಕ್ಕೆ ಕೊಟ್ಟಿದ್ದರು. ಈ ಬಿಸಿ ಬಿಸಿ ಸುದ್ದಿ ಕಾಳ್ಗಿಚ್ಚಿನಂತೆ
ಹರಡಿ ಊರ ಜನಗಳು ಅವರವರ ಅಂದಾಜಿನಂತೆ ಕೊಡದಲ್ಲಿ ಎಷ್ಟು ನಾಣ್ಯಗಳು ಸಿಕ್ಕಿರಬಹುದೆಂದು ಲೆಕ್ಕಾಚಾರ ಮಾಡತೊಡಗಿದರು. ಅಂತೂ ಕೊನೆಗೂ 'ದೇವರಯ್ಯನ ಗಂಟು' ಭೂಮಿಯಿಂದ ಹೊರಬಿತ್ತೆಂದು
ಎಲ್ಲರಿಗೂ ಅನಿಸಿತು.
ಈ ಸಮಾಚಾರ ಶೀಘ್ರದಲ್ಲೇ ತಾಲೂಕಿನ ಪೋಲಿಸ್ ಠಾಣೆಯನ್ನೂ
ತಲುಪಿತು. ಒಬ್ಬ ಸಬ್ ಇನ್ಸ್ಪೆಕ್ಟರ್ ನೇತ್ರತ್ವದಲ್ಲಿ ಒಂದು ಪೋಲಿಸ್ ಪಡೆ ಊರಿಗೆ ಬಂದು ಮನೆಯನ್ನೆಲ್ಲಾ
ಪರಿಶೋಧನೆ ಮಾಡಿ ಮನೆಯ ಯಜಮಾನರನ್ನು ಠಾಣೆಗೆ ಕರೆದುಕೊಂಡು ಹೋಯಿತು. ವಿಚಾರಣೆಯ ನಂತರ ಅವರನ್ನು ಬಿಡುಗಡೆ
ಮಾಡಲಾಯಿತು. ಸ್ವಲ್ಪ ಸಮಯದ ನಂತರ ಪೋಲಿಸ್ ಕೇಸನ್ನು ಕ್ಲೋಸ್ ಮಾಡಲಾಯಿತು. ದೇವರಯ್ಯನ ಗಂಟು ಕೊನೆಗೂ ಹೊರಬಿದ್ದಿತೇ ಎಂಬ ರಹಸ್ಯ ಯಾರಿಗೂ
ತಿಳಿಯಲೇ ಇಲ್ಲ.
No comments:
Post a Comment