ಮೆಟ್ಟಿಲನು ಹತ್ತಿದೆನು
ಕತ್ತುದ್ದ ಮಾಡಿದರೂ
ಅಕ್ಕನಿಲ್ಲ!
ಕುರ್ಚಿಯಲಿ ಕುಳಿತಿಹೆನು
ಕತ್ತೆತ್ತಿ ನೋಡಿದೆನು
ಅತ್ತಿತ್ತ ತಿರುಗಿದರೂ
ಅಕ್ಕನಿಲ್ಲ!
ಒಳಗಿನಾ ಬಾಗಿಲಲಿ
ಹಣಿಕಿಣಿಕಿ ನೋಡಿದೆನು
ಮಿಣುಕುವಾ ದೀಪದಲಿ
ಅಕ್ಕನಿಲ್ಲ!
ಬಚ್ಚಲಾಮನೆಯಲ್ಲಿ
ಹಚ್ಚಿರುವ ಒಲೆಯಿಹುದು
ಬೆಚ್ಚನೆಯ ನೀರಿಹುದು
ಅಕ್ಕನಿಲ್ಲ!
ಅಡಿಗೆಯಾಮನೆಯಲ್ಲಿ
ನಗೆಮೊಗೆಯ ಉಷೆಯಿಹಳು
ಬಿಸಿಬಿಸಿ ಕಾಫಿಯ ನೀಡುವಳು
ಅಕ್ಕನಿಲ್ಲ!
ಮನೆಯ ಕೈತೋಟದಲಿ
ಹಸಿರೆಷ್ಟು ತುಂಬಿಹುದು
ಹೊಸಹೊಸಾ ಹೂವಿಹುದು
ಅಕ್ಕನಿಲ್ಲ!
ದೇವರಾಮನೆಯಲ್ಲಿ
ಭಾವನವರು ಕುಳಿತಿಹರು
ದೇವರ ಪೂಜೆಗೆಯ್ಯುತಿಹರು
ಅಕ್ಕನಿಲ್ಲ!
ಮನೆಯ ಮಾಳಿಗೆಯಲ್ಲಿ
ಅಕ್ಕನಾ ಪಟವಿಹುದು
ನಸುನಗೆಯ ಬೀರುತಿಹಳು
ಕುಸುಮ ಮಾಲೆಯ ನಡುವೆ!
ಓಹ್ ! ಅಕ್ಕ ನೀನಿಲ್ಲಿ ?
------ಎ ವಿ ಕೃಷ್ಣಮೂರ್ತಿ
31ಅಕ್ಟೋಬರ್ 2 0 1 3
No comments:
Post a Comment