Monday, July 27, 2020

ಬಾಲ್ಯ ಕಾಲದ ನೆನಪುಗಳು – ೧೦೪

ಆ ವೇಳೆಗೆ ನನಗೆ ಇನ್ನೊಂದು ಮೂಲದಿಂದಲೂ ಟಾಟಾ ಇನ್ಸ್ಟಿಟ್ಯೂಟಿನ ಬಗ್ಗೆ ಸಹಾಯ ದೊರೆಯುವಂತಾಯಿತು. ನಾನು ಈಗಾಗಲೇ ಡಾಕ್ಟರ್ ತಾರಾನಾಥ್ ಭಟ್ (ಟಿ ಕೆ ಭಟ್ )  ಅವರು ಆ ಕಾಲದ ಶೃಂಗೇರಿಯಲ್ಲಿ ಎಂ.ಬಿ.ಬಿ.ಎಸ್ ಡಿಗ್ರಿ ಹೊಂದಿದ್ದ ಇಬ್ಬರು ಡಾಕ್ಟರುಗಳಲ್ಲಿ ಒಬ್ಬರಾಗಿದ್ದರು ಎಂದು ಬರೆದಿದ್ದೇನೆ. ಆಗ ತುಂಬಾ ವಯಸ್ಸಾಗಿದ್ದರೂ ಭಟ್ ಅವರು ತಮ್ಮ ಪ್ರಾಕ್ಟೀಸ್ ನಿಲ್ಲಿಸಿರಲಿಲ್ಲ. ಅವರಿಂದ ನನಗೊಂದು  ಕರೆ ಬಂತು. ನಾನು ಹೋಗಿ ಅವರನ್ನು ಭೇಟಿ ಮಾಡಿದೆ. ನಾನು ಇನ್ಸ್ಟಿಟ್ಯೂಟಿಗೆ ಅರ್ಜಿ ಹಾಕಿರುವುದು ಅವರಿಗೆ ಗೊತ್ತಾಗಿತ್ತು. ಅವರ ಒಬ್ಬ ಮಗ ಅಲ್ಲಿನ ಫಿಸಿಕ್ಸ್ ಡೆಪಾರ್ಟ್ಮೆಂಟಿನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದರಂತೆ. ಹಾಗೆಯೇ ಇನ್ನೊಬ್ಬ ಮಗ ಅಲ್ಲಿಯೇ ಮೆಟಲರ್ಜಿಯಲ್ಲಿ ಆಗತಾನೇ ಮಾಸ್ಟರ್ ಡಿಗ್ರಿ ಪಡೆದಿದ್ದನಂತೆ. ಅವರು ನನಗೆ ಅವರ ಪ್ರೊಫೆಸರ್ ಆಗಿದ್ದ ಮಗನನ್ನು ಭೇಟಿ  ಮಾಡಿ ಅವರಿಂದ ಬೇಕಾದ ಯಾವುದೇ ಸಹಾಯವನ್ನು ಪಡೆಯುವಂತೆ ಸೂಚಿಸಿದರು. ನಾನು ಬೇಡದೇ ಬಂದ ಅವರ ಸಲಹೆಯನ್ನು ಕೇಳಿ ನನಗಾದ ಸಂತೋಷ ಅಷ್ಟಿಷ್ಟಲ್ಲ.

ಅಷ್ಟರಲ್ಲೇ ನನಗೆ ಟಾಟಾ ಇನ್ಸ್ಟಿಟ್ಯೂಟಿನಿಂದ ಟೆಸ್ಟ್ ಮತ್ತು ಸಂದರ್ಶನಕ್ಕೆ ಕರೆ ಬಂತು. ನಾನು ಜುಲೈ ತಿಂಗಳ ಕೊನೆಯ ವಾರ ಅದಕ್ಕಾಗಿ ಬೆಂಗಳೂರಿಗೆ ಹೋಗಬೇಕಿತ್ತು. ನಾನು ಅಲ್ಲಿಯವರೆಗೆ ಬೆಂಗಳೂರಿಗೆ ಹೋಗಿಯೇ ಇರಲಿಲ್ಲ. ಅದು ನಮ್ಮ ರಾಜ್ಯದ ರಾಜಧಾನಿಗೆ ನನ್ನ ಮೊಟ್ಟ ಮೊದಲ ಭೇಟಿಯಾಗಲಿತ್ತು. ನಮ್ಮ ಪುಟ್ಟಣ್ಣ ಆಗಲೇ ಒಬ್ಬ ಬೆಂಗಳೂರಿಗನಾಗಿಬಿಟ್ಟಿದ್ದ. ಅವನು ಬಿ. ಕಾಂ. ಡಿಗ್ರಿಯ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ. ನಾನು ಅವನ ಜೊತೆಯಲ್ಲಿ ಬೆಂಗಳೂರಿಗೆ ಹೋಗಲು ತೀರ್ಮಾನಿಸಿದೆ.

೧೯೬೯ನೇ ಇಸವಿಯ ಜುಲೈ ತಿಂಗಳು ಭಾರತದ ಮತ್ತು ಪ್ರಪಂಚದ ಇತಿಹಾಸದಲ್ಲಿ ಒಂದು ಮಹತ್ವದ ತಿಂಗಳಾಗಿತ್ತು. ಆ ತಿಂಗಳ ೧೯ನೇ ತಾರೀಕು ಇಂದಿರಾ ಗಾಂಧಿಯವರ ನೇತೃತ್ವದ ಭಾರತ ಸರ್ಕಾರವು ದೇಶದ ೧೪ ದೊಡ್ಡ ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡುವ ತನ್ನ ನಿರ್ಧಾರವನ್ನು ಪ್ರಕಟಿಸಿತು. ಆ ಬ್ಯಾಂಕುಗಳಲ್ಲಿ ದಕ್ಷಿಣ ಕನ್ನಡ ಮೂಲದ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಕೂಡ ಸೇರಿದ್ದವು. ಶೃಂಗೇರಿಯ ಸಿಂಡಿಕೇಟ್ ಬ್ಯಾಂಕಿನ ಶಾಖೆಯಲ್ಲಿ ಆ ದಿನ ಯಾವುದೇ ವ್ಯವಹಾರಗಳು ನಡೆಯಲಿಲ್ಲ. ತುಂಬಾ ಸಾರ್ವಜನಿಕರಿಗೆ ಈ ರಾಷ್ಟ್ರೀಕರಣ ಅಂದರೆ ಏನೆಂದೇ ಅರಿವಾಗಲಿಲ್ಲ. ಒಟ್ಟಿನಲ್ಲಿ ತಾವು ಬ್ಯಾಂಕಿನಲ್ಲಿಟ್ಟ ಹಣ ಸುರಕ್ಷಿತವಾಗಿದ್ದರೆ ಸಾಕೆಂದು ಭಾವಿಸಿದರು.

ಇನ್ನೊಂದು ಮಹತ್ವದ ಘಟನೆ ಎಂದರೆ ಅಮೆರಿಕಾದ ಗಗನಯಾತ್ರಿ ನೀಲ್ ಆರ್ಮ್ ಸ್ಟ್ರಾಂಗ್ ಅವರು ಚಂದ್ರ ಗ್ರಹದಲ್ಲಿ ಕಾಲಿರಿಸಿದ್ದು. ಅಮೆರಿಕಾದ ಅಪೋಲೋ ೧೧ ಬಾಹ್ಯಾಕಾಶ ನೌಕೆ ೧೯೬೯ನೇ ಇಸವಿಯ ೨೦ನೇ ತಾರೀಕು ಚಂದ್ರಗ್ರಹವನ್ನು ತಲುಪಿತ್ತು. ಆಗಿನ ಸಮಾಚಾರ ಪತ್ರಿಕೆಗಳಲ್ಲಿ ಈ ಈವೆಂಟಿನ ಬಗ್ಗೆ ತುಂಬಾ ಫೋಟೋಗಳು ಮತ್ತು ವಿವರಗಳೂ ಬಂದವು. ನಾವು ತುಂಬಾ ಆಸಕ್ತಿಯಿಂದ ಅದನ್ನೆಲ್ಲಾ ಓದಿದ್ದುದು ನೆನಪಿಗೆ ಬರುತ್ತಿದೆ.

ನಾನು ಈ ಹಿಂದೆಯೇ ಪುರದಮನೆ ಶ್ರೀನಿವಾಸಯ್ಯನವರು ನನ್ನ ವಿದ್ಯಾಭ್ಯಾಸಕ್ಕೆ ಹಣದ ಸಹಾಯ ಮಾಡಿದ್ದನ್ನು ಬರೆದಿದ್ದೇನೆ. ನಾನು ಎರಡನೇ ಬಾರಿ Rank ಪಡೆದು ನನ್ನ ಹೆಸರು ನ್ಯೂಸ್ ಪೇಪರಿನಲ್ಲಿ ಬಂದುದನ್ನು ನೋಡಿ ಅವರಿಗೆ ತುಂಬಾ ಸಂತೋಷವಾಗಿತ್ತು. ನಾನೂ ಮತ್ತು ಪುಟ್ಟಣ್ಣ ಜೊತೆಯಾಗಿ ಬೆಂಗಳೂರಿಗೆ ಪ್ರಯಾಣ ಮಾಡುವ ವಿಷಯ ಅವರಿಗೆ ತಿಳಿದು ನಮಗೆ ಕರೆ ಕಳುಹಿಸಿದರು. ಶ್ರೀನಿವಾಸಯ್ಯನವರು ತಮ್ಮ ಮನೆಯ ಮುಂದಿದ್ದ ತೋಟದಲ್ಲಿ ತುಂಬಾ ಹೂವು ಮತ್ತು ಹಣ್ಣುಗಳನ್ನು ಬೆಳೆಯುತ್ತಿದ್ದರು. ನಿಜ ಹೇಳಬೇಕೆಂದರೆ ಅವರೊಂದು ಸುಂದರ ತೋಟಗಾರಿಕಾ ಫಾರ್ಮ್ಅನ್ನು ಮನೆಯ ಮುಂದೆ ಹೊಂದಿದ್ದರು. ಅವರು ನಮಗೆ ಬೆಂಗಳೂರಿನ ಲಾಲ್ ಭಾಗ್ ಫಾರ್ಮ್ ನಿಂದ ಅಪರೂಪದ ಕೆಲವು ಹೂವಿನ ಗಿಡಗಳನ್ನು ತೆಗೆದುಕೊಂಡು ಬರುವಂತೆ ಹೇಳಿದರು.

ಜುಲೈ ತಿಂಗಳ ಮೂರನೇ ವಾರ  ಪುಟ್ಟಣ್ಣ ಮತ್ತು ನಾನು ಬೆಂಗಳೂರಿಗೆ ಪ್ರಯಾಣ ಬೆಳೆಸಿದೆವು . ಆಗ ಶೃಂಗೇರಿ-ಬೆಂಗಳೂರು ಸರ್ಕಾರೀ ಬಸ್ಸಿಗೆ ಕೇವಲ ಕೊಪ್ಪ ಮತ್ತು ಜಯಪುರದಲ್ಲಿ ಮಾತ್ರ ಸ್ಟಾಪ್ ಇದ್ದವು. ನಾವು ಜಯಪುರಕ್ಕೆ ಕಾಲ್ನಡಿಗೆ ಪ್ರಯಾಣ ಮಾಡಿ ಅಲ್ಲಿ ಬಸ್ ಹತ್ತಿದೆವು. ಆ ಕಾಲದಲ್ಲಿ ಸರ್ಕಾರದ ಲೇಲ್ಯಾಂಡ್ ಬಸ್ಸಿನಲ್ಲಿ ಪ್ರಯಾಣ ಮಾಡುವುದು ಒಂದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಏಕೆಂದರೆ ನಮ್ಮೂರುಗಳಲ್ಲೆಲ್ಲಾ ಕೇವಲ ಶಂಕರ್ ಮೋಟಾರ್ ಕಂಪನಿಯ ಬೆಂಜ್ ಬಸ್ಸುಗಳೇ ಓಡಾಡುತ್ತಿದ್ದವು. ಕೊಪ್ಪ-ಶೃಂಗೇರಿ-ಚಿಕ್ಕಮಗಳೂರು ಮಾರ್ಗಗಳಲ್ಲಿ ಶಂಕರ್ ಕಂಪನಿ ಏಕಸ್ವಾಮ್ಯತೆಯನ್ನು ಹೊಂದಿತ್ತು. ನಾನು ನಮ್ಮ ಖರ್ಚಿಗಾಗಿ ಸಿಂಡಿಕೇಟ್ ಬ್ಯಾಂಕಿನ ನನ್ನ ಖಾತೆಯಿಂದ ೧೦೦ ರೂಪಾಯಿ ತೆಗೆದುಕೊಂಡಿದ್ದೆ. ನನ್ನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಗಳೂರು ಪ್ರಯಾಣ ಮಾಡುತ್ತಿದ್ದಾಗ ನನಗಿದ್ದ ಉತ್ಸಾಹ ಅಷ್ಟಿಷ್ಟಲ್ಲ. ಮಾರ್ಗದಲ್ಲಿ ನಮ್ಮ ಬಸ್ಸು ಚಿಕ್ಕಮಗಳೂರು, ಅರಸೀಕೆರೆ,ತಿಪಟೂರು ಮತ್ತು ತುಮಕೂರುಗಳನ್ನು ಹಾದು ಹೋಯಿತು. ಚಿಕ್ಕಮಗಳೂರನ್ನು ಬಿಟ್ಟರೆ ಉಳಿದವೆಲ್ಲ ನನಗೆ ಹೊಸ ಊರುಗಳೇ.

ರಾತ್ರಿ ಸುಮಾರು ೮ ಗಂಟೆಗೆ ನಮ್ಮ ಬಸ್ಸು ಬೆಂಗಳೂರಿನ ಹೊರವಲಯವನ್ನು ಪ್ರವೇಶ ಮಾಡಿತು. ಮುಂದೆ ಅದು ಯೆಶವಂತಪುರ, ರಾಜಾಜಿನಗರ ಮತ್ತು ಮಲ್ಲೇಶ್ವರಂ ಮಾರ್ಗವಾಗಿ ಸುಭಾಷ್ ನಗರದಲ್ಲಿದ್ದ ಬಸ್ ನಿಲ್ದಾಣವನ್ನು ತಲುಪಿತು. ನಮ್ಮ ರಾಜ್ಯದ ರಾಜಧಾನಿಗೆ ನಾನು ಪ್ರಥಮ ಬಾರಿಗೆ ಪ್ರವೇಶ ಮಾಡಿದ್ದೆ. ಈ ಸುಂದರ ನಗರದಲ್ಲಿ  ನನ್ನ ಭವಿಷ್ಯ ಹೇಗಿರುವುದೆಂಬ ಬಗ್ಗೆ ನನಗೆ ಆಗ ಸ್ವಲ್ಪವೂ ಅರಿವಿರಲಿಲ್ಲ.

----ಮುಂದುವರಿಯುವುದು ---







Wednesday, July 22, 2020

ಬಾಲ್ಯ ಕಾಲದ ನೆನಪುಗಳು – ೧೦೩

ಪುಟ್ಟಣ್ಣ ಮತ್ತು ನಾನು ಬಿ. ಕಾಂ. ಮತ್ತು ಬಿ. ಎಸ್ ಸಿ. ಅಂತಿಮ ಪರೀಕ್ಷೆ ಮುಗಿಸುವುದರೊಂದಿಗೆ ನಮ್ಮೂರಿನಲ್ಲಿ ಒಂದು ದಾಖಲೆ ಮಾಡುವವರಿದ್ದೆವು. ಏಕೆಂದರೆ ನಾವಿಬ್ಬರೂ ಪರೀಕ್ಷೆಯಲ್ಲಿ ಪಾಸಾಗುವುದರಲ್ಲಿ ಯಾವುದೇ ಸಂಶಯವಿಲ್ಲದ್ದರಿಂದ ನಾವು ನಮ್ಮೂರಿನ ಮೊದಲ ಪದವೀಧರರಾಗಲಿದ್ದೆವು. ನಾವಿಬ್ಬರೂ ಕಾತರದಿಂದ ನಮ್ಮ ಪರೀಕ್ಷಾ ಫಲಿತಾಂಶಕ್ಕೆ ಕಾಯುತ್ತಿದ್ದೆವು. ಹಾಗೆಯೇ ಮುಂದೆ ನಮ್ಮ ಭವಿಷ್ಯದಲ್ಲಿ ಏನು ಬರೆದಿದೆಯೋ ಎಂದು ಚಿಂತಿಸುತ್ತಿದ್ದೆವು. ಪುಟ್ಟಣ್ಣ ಬೆಂಗಳೂರಿನಲ್ಲೇ ಯಾವುದಾದರೂ ನೌಕರಿ ಮಾಡುವುದಾಗಿ ತೀರ್ಮಾನಿಸಿದ್ದ. ಆದರೆ ನನ್ನ ಭವಿಷ್ಯ ನನ್ನ ಪರೀಕ್ಷೆಯ ಫಲಿತಾಂಶದ ಮೇಲೆ ನಿರ್ಧಾರವಾಗಲಿತ್ತು.

ಇದೇ  ವೇಳೆಯಲ್ಲಿ ನಮ್ಮ ಕುಟುಂಬದ ಹಣಕಾಸಿನ ಪರಿಸ್ಥಿತಿ ಏನೂ ಸರಿಯಿರಲಿಲ್ಲ. ನಮ್ಮ ತಮ್ಮ ಮಾಧವ ಎಸ್.ಎಸ್.ಎಲ್.ಸಿ ಪಾಸ್ ಮಾಡಿದ್ದರೂ ಅವನ ಮುಂದಿನ ಓದಿನ ಬಗ್ಗೆ ಏರ್ಪಾಟು ಮಾಡುವಷ್ಟು ಆರ್ಥಿಕ ಪರಿಸ್ಥಿತಿ ನಮ್ಮ ತಂದೆಯವರಿಗಿರಲಿಲ್ಲ. ನಿರ್ವಾಹವಿಲ್ಲದೇ ಅವನು ತಾತ್ಕಾಲಿಕವಾಗಿ ಅಗಳಗಂಡಿ ತಿಮ್ಮಪ್ಪನ ಅಂಗಡಿಯಲ್ಲಿ ಕೆಲಸ ಮಾಡತೊಡಗಿದ. ಇನ್ನು ಮದುವೆಯ ವಯಸ್ಸಿಗೆ ಬಂದಿದ್ದ ತಂಗಿಗೆ ಸೂಕ್ತ ವರನನ್ನು ಹುಡುಕಬೇಕಾಗಿತ್ತು. ಆದರೆ ಸೂಕ್ತ ವರ ದೊರೆತರೂ ಮದುವೆಯ ಖರ್ಚನ್ನು ನಿಭಾಯಿಸುವ ಶಕ್ತಿ ತಂದೆಯವರಿಗಿರಲಿಲ್ಲ. ಇಷ್ಟಲ್ಲದೇ ನಮ್ಮ ದೊಡ್ಡ ಅಣ್ಣ ರಾಮಕೃಷ್ಣ ಶಿವಮೊಗ್ಗೆಯಲ್ಲಿ ತನ್ನ ಕುಟುಂಬದ ಖರ್ಚನ್ನು ನಿಭಾಯಿಸಲಾಗದೇ ಊರಿಗೆ ವಾಪಾಸ್ ಬರಲು ತೀರ್ಮಾನಿಸಿದ್ದ. ಶಿವಮೊಗ್ಗೆಯಲ್ಲೇ ತನ್ನ ಸಂಸಾರವನ್ನು ನೆಲೆಗೊಳಿಸಬೇಕೆಂಬ ಅವನ ಕನಸು ನನಸಾಗಲಿಲ್ಲ. ಅವನ ಮಾವ ಹುರುಳಿಹಕ್ಕಲಿನ ಲಕ್ಷ್ಮೀನಾರಾಯಣರಾಯರು ತಮ್ಮ ಜಮೀನು ಮಾರಾಟಮಾಡಿ ಬಂದ ಹಣವನ್ನೆಲ್ಲಾ ಬೇರೆ ಬೇರೆ ನಷ್ಟದ ವ್ಯವಹಾರಗಳಲ್ಲಿ ತೊಡಗಿಸಿ ಕಳೆದುಕೊಂಡುಬಿಟ್ಟಿದ್ದರು.

ನನಗೆ ಅಂತಿಮ ಪರೀಕ್ಷೆಯಲ್ಲಿ Rank ಪಡೆಯುವುದು ಅತ್ಯಾವಶ್ಯಕವಾಗಿತ್ತು. ಏಕೆಂದರೆ ನಾನು ಪಿ.ಯು.ಸಿ. ಪರೀಕ್ಷೆಯಲ್ಲಿ ನಾಲ್ಕನೇ Rank ಪಡೆಯುವುದರ ಮೂಲಕ ಒಂದು ಉನ್ನತ ಮಟ್ಟವನ್ನು ತಲುಪಿಬಿಟ್ಟಿದ್ದೆ.  ಆದ್ದರಿಂದ ನನ್ನ ಗುರುಗಳು ಮತ್ತು ಹಿತೈಷಿಗಳು ನಾನು ಆ ಮಟ್ಟವನ್ನು ಕಾಯ್ದುಕೊಳ್ಳುವೆನೆಂದು ನಿರೀಕ್ಷಿಸುತ್ತಿದ್ದರಲ್ಲಿ ಆಶ್ಚರ್ಯವೇನಿರಲಿಲ್ಲ. ಆದರೆ ನಾನು ಕೆಮಿಸ್ಟ್ರಿ ಪ್ರಶ್ನೆ ಪತ್ರಿಕೆಗಳಿಗೆ ತೃಪ್ತಿಕರವಾಗಿ ಉತ್ತರಿಸದಿದ್ದರಿಂದ ಮ್ಯಾಥಮ್ಯಾಟಿಕ್ಸ್ ಮೇಜರ್ ತೆಗೆದುಕೊಂಡ ವಿದ್ಯಾರ್ಥಿಗಳೊಡನೆ ಪೈಪೋಟಿ ನಡೆಸಿ Rank ಪಡೆಯುವೆನೆಂಬುದು ಅಸಾಧ್ಯವೆನಿಸುತ್ತಿತ್ತು. ನನಗೆ ಕೆಮಿಸ್ಟ್ರಿ ಪೇಪರ್ ಗಳಲ್ಲಿ ಶೇಖಡ ೭೦ ಕ್ಕಿಂತ ಹೆಚ್ಚು ಅಂಕಗಳು ಬರುವಂತೆ ಕಾಣುತ್ತಿರಲಿಲ್ಲ. ಆದರೆ Rank ಪಡೆಯಲು ಆ ಅಂಕಗಳು ಸಾಕಾದಾವೆ ಎಂಬುದು ಯಕ್ಷಪ್ರಶ್ನೆಯಾಗಿತ್ತು.

ನಮ್ಮ ಪರೀಕ್ಷಾ ಫಲಿತಾಂಶಗಳು  ೧೯೬೯ ನೇ ಇಸವಿಯ ಜೂನ್ ೨೫ನೇ ತಾರೀಕು ಪ್ರಕಟವಾಗಲಿದ್ದವು. ನನ್ನ ತಮ್ಮ ಮಾಧವ ನ್ಯೂಸ್ ಪೇಪರ್ ತರಲು ಉತ್ತಮೇಶ್ವರ ಪೋಸ್ಟ್ ಆಫೀಸಿಗೆ ಹೋಗಿದ್ದ. ಸುಮಾರು ಮದ್ಯಾಹ್ನ ೪ ಗಂಟೆಯ ವೇಳೆಗೆ ಅವನು ತುಂಬಾ ಉತ್ಸಾಹ ಮತ್ತು ಆತುರದಿಂದ ನ್ಯೂಸ್ ಪೇಪರ್ ಕೈಯಲ್ಲಿ ಹಿಡಿದು ಬರುವುದು ಕಾಣಿಸಿ ನನ್ನ ಎದೆ ಬಡಿತ ಜಾಸ್ತಿಯಾಯಿತು. ಅವನು Rank ಪಡೆದವರ ಪಟ್ಟಿಯಲ್ಲಿ ನನ್ನ ಹೆಸರು ಹುಡುಕುತ್ತಾ ಹೋದನಂತೆ. ಆ ಪಟ್ಟಿಯ ಮೇಲಿನಿಂದ ಕೆಳಗೆ ಕಣ್ಣು ಹಾಯಿಸಿದಾಗ ಕಟ್ಟ  ಕಡೆಯಲ್ಲಿ ನನ್ನ ಹೆಸರು ಅವನ ಕಣ್ಣಿಗೆ ಬಿತ್ತಂತೆ!  ಹೌದು. ಪಟ್ಟಿಯಲ್ಲಿ ಕಟ್ಟ  ಕಡೆಯ ೧೦ನೇ Rank ನನ್ನದಾಗಿತ್ತು! ಮತ್ತು ನನಗೆ ಒಟ್ಟಿನಲ್ಲಿ ಶೇಖಡ ೭೯.೯ ಅಂಕಗಳು ಬಂದಿದ್ದವು. ಒಟ್ಟಿನಲ್ಲಿ Rank ಸ್ಟೂಡೆಂಟ್ ಎಂಬ ನನ್ನ ಹಿಂದಿನ ಹಿರಿಮೆಯನ್ನು ನಾನು ಉಳಿಸಿಕೊಂಡಿದ್ದೆ.

ನಾನು ಮಾರನೇ ದಿನವೇ ಶೃಂಗೇರಿಗೆ ಹೋದೆ. ಶ್ರೀಕಂಠಯ್ಯನವರ ಮನೆಯಲ್ಲಿ ನನಗೆ ತುಂಬಾ ಆದರದ ಸ್ವಾಗತ ದೊರೆಯಿತು. ತಮ್ಮ ನಿರೀಕ್ಷೆಯಂತೆ ನಾನು ಕೊನೆಗೂ Rank ಗಳಿಸಿದ್ದನ್ನು ತಿಳಿದು  ಶ್ರೀಕಂಠಯ್ಯನವರಿಗೆ ತುಂಬಾ ಸಂತೋಷವಾಗಿತ್ತು. ನನ್ನ ಕಾಲೇಜ್ ಅದ್ಯಾಪಕರುಗಳೂ ಕೂಡಾ ತುಂಬಾ ಸಂತೋಷದಿಂದ ನನ್ನನ್ನು ಅಭಿನಂದಿಸಿದರು. ನಾನು ಕೊನೆಗೂ ಅವರ ನಿರೀಕ್ಷೆಯಂತೆ Rank ಗಳಿಸುವುದರಲ್ಲಿ ಸಫಲನಾಗಿದ್ದೆ. ಪ್ರಿನ್ಸಿಪಾಲ್ ರಾಮಕೃಷ್ಣರಾಯರೂ ತುಂಬಾ ಸಂತೋಷದಿಂದ ನನ್ನನ್ನು ಅಭಿನಂದಿಸಿದರು. ಅವರು ಸದ್ಯದಲ್ಲಿಯೇ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹಿಂದೂ ತತ್ವಶಾಸ್ತ್ರದ ಪ್ರೊಫೆಸರ್ ಆಗಿ ಚಾರ್ಜ್ ತೆಗೆದುಕೊಳ್ಳುವರಿದ್ದರು. ನಾನು ಅವರಿಗೆ ಕೃಷ್ಣಪ್ಪಯ್ಯನವರ ಸಲಹೆಯಂತೆ ಟಾಟಾ ಇನ್ಸ್ಟಿಟ್ಯೂಟ್ ಸೇರಿಕೊಳ್ಳುವುದಾಗಿ ತಿಳಿಸಿದೆ. ಅದಕ್ಕಾಗಿ ಮಣಿಪಾಲ್ ಅಕಾಡೆಮಿಯ ಒಪ್ಪಿಗೆ ಕೊಡಿಸುವಂತೆ ಕೇಳಿಕೊಂಡೆ. ಅವರು  ಅಕಾಡೆಮಿಯನ್ನು ಸಂಪರ್ಕಿಸಿ  ನಾನು ಯಾವುದೇ ವಿದ್ಯಾಸಂಸ್ಥೆಯಲ್ಲಿ ನನ್ನ ವಿದ್ಯಾಭ್ಯಾಸ ಮುಂದುವರಿಸಲು ಅಕಾಡೆಮಿಯ ಅಭ್ಯಂತರ ಇಲ್ಲವೆಂದು ತಿಳಿಸಿದರು. ನಾನು ಅಕಾಡೆಮಿಯು ಟಾಟಾ ಇನ್ಸ್ಟಿಟ್ಯೂಟ್ ನಲ್ಲಿ ಕೂಡ ನನಗೆ ಫೀ ಕಟ್ಟಲು ಸಹಾಯ ಮಾಡುವುದೆಂದು ಭಾವಿಸಿದೆ.

ಅಲ್ಲಿಂದ ನಾನು ಟಾಟಾ ಇನ್ಸ್ಟಿಟ್ಯೂಟಿಗೆ ಸೇರಿಕೊಳ್ಳುವ ಕಡೆ ಗಮನ ಹರಿಸಿದೆ. ಮೊದಲಿಗೆ ಪ್ರಾಸ್ಪೆಕ್ಟಸ್ ಮತ್ತು ಅಡ್ಮಿಶನ್ ಅರ್ಜಿ (application) ಕಳಿಸಲು ಇನ್ಸ್ಟಿಟ್ಯೂಟಿಗೆ ಹಣ ಕಳಿಸಿದೆ. ಒಂದು ವಾರದಲ್ಲೇ ಅವು ನನ್ನ ಕೈಸೇರಿದವು. ಪ್ರಾಸ್ಪೆಕ್ಟಸ್ ಸಂಪೂರ್ಣವಾಗಿ ಓದುವಾಗ ನನಗೆ ಇನ್ಸ್ಟಿಟ್ಯೂಟಿನಲ್ಲಿ ಇಂಜಿನಿಯರಿಂಗ್ ಓದುವುದು ಇಂತಹ ಅಪೂರ್ವ  ಅವಕಾಶವೆಂದು ಅರಿವಾಯಿತು. ಆಗ ವಿಖ್ಯಾತ ಪ್ರೊಫೆಸರ್ ಮತ್ತು ಮುಂದೆ ಪದ್ಮ ವಿಭೂಷಣ ಪ್ರಶಸ್ತಿಯನ್ನು ಪಡೆದ ಸತೀಶ್ ಧಾವನ್ ಅವರು ಇನ್ಸ್ಟಿಟ್ಯೂಟಿನ ಡೈರೆಕ್ಟರ್ ಆಗಿದ್ದರು.

ಆದರೆ ನನಗೆ ಇನ್ಸ್ಟಿಟ್ಯೂಟಿನಲ್ಲಿ ಸೀಟ್ ಗಳಿಸುವುದು ಎಷ್ಟು ಮುಖ್ಯವಾಗಿತ್ತೋ ಅಷ್ಟೇ ಮುಖ್ಯ ಅಲ್ಲಿ ವಿದ್ಯಾಭ್ಯಾಸ ಮಾಡಲು ಸಾಕಷ್ಟು ಹಣವನ್ನು ಒದಗಿಸಿಕೊಳ್ಳುವುದಾಗಿತ್ತು. ಬ್ಯಾಂಕಿನಲ್ಲಿದ್ದ ನನ್ನ ಹಣ ನನ್ನ ಖರ್ಚಿಗೆ ಕೇವಲ ಕೆಲವೇ ತಿಂಗಳಿಗೆ ಸಾಕಾಗುವಷ್ಟಿತ್ತು. ನನ್ನ ಒಟ್ಟು ಎಲ್ಲಾ ಖರ್ಚುಗಳಿಗೆ ವರ್ಷ ಪೂರ್ತಿ ಹಣ ಸಾಕಾಗುವಂತೆ ಮಾಡಿಕೊಳ್ಳುವುದು ನನ್ನ ಮೊದಲ ಜವಾಬ್ದಾರಿಯಾಗಿತ್ತು.

ಅಷ್ಟರಲ್ಲಿ ನನ್ನ ಖರ್ಚಿಗಾಗಿ ಹಣದ ಸಮಸ್ಯೆ ಸ್ವಲ್ಪ ಸುಸೂತ್ರವಾಗಿ ಬಗೆಹರಿಯುವಂತೆ ಕಾಣಿಸತೊಡಗಿತು. ನನ್ನ ಮ್ಯಾಥಮ್ಯಾಟಿಕ್ಸ್ ಉಪನ್ಯಾಸಕರಾದ ಎನ್. ರಾಮಚಂದ್ರ ಭಟ್ ಅವರು ನನಗೆ ಯಾವಾಗಲೂ ನೈತಿಕ ಬೆಂಬಲ ನೀಡುತ್ತಿದ್ದರು. ನನಗೆ ಮ್ಯಾಥಮ್ಯಾಟಿಕ್ಸ್ ಸಬ್ಜೆಕ್ಟಿನಲ್ಲಿ ೧೦೦ಕ್ಕೆ ನೂರು ಅಂಕಗಳನ್ನು ತೆಗೆಯುವುದು ಸಾಧ್ಯವೆಂದು ಹೇಳಿ ಪಿ ಯು ಸಿ ಪರೀಕ್ಷೆಯಲ್ಲಿ ನಾನದನ್ನು ಸಾಧಿಸುವಂತೆ ಮಾಡಿದ ಕ್ರೆಡಿಟ್ ಅವರಿಗೆ ಸೇರಿತ್ತು. ನನ್ನ ಫಲಿತಾಂಶ ಬರುವ ವೇಳೆಗೇ ಅವರು ಸಿಂಡಿಕೇಟ್ ಬ್ಯಾಂಕಿನಲ್ಲಿ ಪ್ರೊಬೇಷನರಿ ಆಫೀಸರ್ ಆಗಿ ಆಯ್ಕೆಯಾಗಿದ್ದರು. ಅವರು ನಮ್ಮ ಕಾಲೇಜ್ ತ್ಯಜಿಸಿ ಮಣಿಪಾಲಿನಲ್ಲಿ ಟ್ರೇನಿಂಗ ಪಡೆಯಲು ಹೋಗುವ ಮುನ್ನ ಅವರು ನನ್ನ ಓದಿಗಾಗಿ ಹಣಕಾಸಿನ ಸಹಾಯ ಮಾಡುವುದಾಗಿ ಭರವಸೆ ಕೊಟ್ಟರು. ನಾನು ಇನ್ಸ್ಟಿಟ್ಯೂಟಿಗೆ ಸೇರಿಕೊಂಡ ಮೇಲೆ ಅವರನ್ನು ಸಂಪರ್ಕಿಸುವಂತೆ ತಿಳಿಸಿದರು. ಅಷ್ಟರಲ್ಲಿ ನಾನೆಂದೂ ಎಣಿಸದಂತಹ ಮೂಲ ಒಂದರಿಂದ  ನನಗೆ ಸಹಾಯ ಒದಗಿ ಬಂತು.

ವಕೀಲ ಶ್ರೀಕಂಠ ಭಟ್

ಮೈಸೂರು ವಿಧಾನ ಸಭೆಗೆ ಭಾರತೀಯ ಜನಸಂಘದಿಂದ ಸ್ಪರ್ದಿಸಿದ್ದ ವಕೀಲ ಶ್ರೀಕಂಠ ಭಟ್ ಅವರು ಅವರನ್ನು ಬಂದು ಭೇಟಿಯಾಗುವಂತೆ ನನಗೆ ಒಂದು ಸಂದೇಶ ಕಳಿಸಿದರು. ಅವರ ಮನೆ ನಮ್ಮ ಮನೆಯಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿತ್ತು. ನಾನು ಅವರ ಮನೆಗೆ ಹೋಗಿ ಅವರನ್ನು ಭೇಟಿ ಮಾಡಿದೆ. ಅವರ ತುಂಬಾ ಸರಳ ವ್ಯಕ್ತಿತ್ವವನ್ನು ಕಂಡು ನನಗೆ ಆಶ್ಚರ್ಯ ಮತ್ತು ಸಂತೋಷ ಉಂಟಾಯಿತು. ನಾನವರೊಡನೆ ಮೊದಲ ಬಾರಿ ನೇರ ಸಂಭಾಶಣೆ ಮಾಡುವ ಅವಕಾಶ ಪಡೆದಿದ್ದೆ. ಅವರು ನೇರವಾಗಿ ನನ್ನೊಡನೆ ನನ್ನ ಮುಂದಿನ ವಿದ್ಯಾಭ್ಯಾಸದ ಪ್ಲಾನ್ ಏನೆಂದು ಕೇಳಿದರು. ನಾನು ಟಾಟಾ ಇನ್ಸ್ಟಿಟ್ಯೂಟಿನಲ್ಲಿ ಮೆಟಲರ್ಜಿ ಇಂಜಿನಿಯರಿಂಗ್ ಓದುವ ನನ್ನ ಬಯಕೆಯನ್ನು ಅವರಿಗೆ ತಿಳಿಸಿದೆ. ಹಾಗೆಯೇ ನಮ್ಮ ಕುಟುಂಬದ ಹಣಕಾಸಿನ ಪರಿಸ್ಥಿತಿ ಸರಿಯಿಲ್ಲದಿರುವುದನ್ನೂ ಹೇಳಿಕೊಂಡೆ. ಅವರು ನನ್ನನ್ನು ಅವರಿಗೆ ಪರಿಚಯಸ್ಥರಾದ ಕೆಲವರ ಮನೆಗಳಿಗೆ ಕರೆದುಕೊಂಡು ಹೋಗಿ ಅವರಿಂದ ನನ್ನ ವಿದ್ಯಾಭ್ಯಾಸಕ್ಕೆ ಕೊಡುಗೆ ನೀಡಿಸುವುದಾಗಿ ಹೇಳಿದರು. ನಾನು ಅವರೊಡನೆ ಹಿಂದೆ ನನ್ನ ತಂದೆಯವರು ಕೊಡುಗೆಗಾಗಿ ಕೆಲವು ಮನೆಗಳಿಗೆ ನನ್ನನ್ನು ಕರೆದುಕೊಂಡು ಹೋದಾಗ  ಆದ  ಕೆಟ್ಟ ಅನುಭವವನ್ನು ಹೇಳಿಕೊಂಡೆ. ಅವರು ಆ ಬಗ್ಗೆ ನಾನು ಚಿಂತಿಸಬೇಕಾಗಿಲ್ಲವೆಂದೂ ಮತ್ತು ನಾನು ಸುಮ್ಮನೆ ಅವರೊಡನೆ ಅವರು ಹೇಳಿದ ಮನೆಗಳಿಗೆ ಬಂದರೆ ಸಾಕೆಂದೂ ತಿಳಿಸಿದರು.

ಇಂದು ನಾನು ನನ್ನ ಬಾಲ್ಯಕಾಲದ ನೆನಪಿನ ಪುಟಗಳನ್ನು ತಿರುವಿ ಹಾಕುತ್ತಿರುವಾಗ ಶ್ರೀಯುತ ಶ್ರೀಕಂಠ ಭಟ್ ಅವರು ಏಕೆ ನನ್ನ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಆಸಕ್ತಿ ವಹಿಸಿದ್ದರೆಂದು ತಿಳಿಯಲಾಗುತ್ತಿಲ್ಲ. ನನ್ನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ಅವರಿಗೆ ಯಾವುದೇ ಕಾರಣಗಳಿರಲಿಲ್ಲ. ಅವರಿಗೆ ನನ್ನ ಬಗ್ಗೆಯಾಗಲೀ ಅಥವಾ ನನ್ನ ಕುಟುಂಬದ ಬಗ್ಗೆಯಾಗಲೀ ಏನೂ ಅರಿವಿರಲಿಲ್ಲ. ಕೇವಲ ನಾನು ಶೃಂಗೇರಿ ಕಾಲೇಜಿನಲ್ಲಿ ಎರಡು ಬಾರಿ Rank ಗಳಿಸಿದ್ದೇನೆಂದು ಮಾತ್ರ ಗೊತ್ತಿತ್ತು. ಒಬ್ಬ ಅಪರಿಚಿತನಾದ ನನಗೆ ಸಹಾಯ ಮಾಡುವುದರಲ್ಲಿ ಅವರಿಗೆ ಯಾವುದೇ ಲಾಭವಿರಲಿಲ್ಲ. ಆದರೆ ಅವರದೇ ವಲಯದಲ್ಲಿ ಅವರ ಮಾತಿಗೆ ಎಷ್ಟು ಬೆಲೆಯಿತ್ತೆಂದು ನನಗೆ ಶೀಘ್ರವೇ ಅರಿವಾಯಿತು. ಅವರು ನನ್ನನ್ನು ಅವರ ಮನೆಯ ಸುತ್ತಮುತ್ತಲಿದ್ದ ಕೆಲವು ಮನೆಗಳಿಗೆ ಕರೆದುಕೊಂಡು ಹೋದರು. ನನ್ನ ಹಿಂದಿನ ಹಣ ಸಂಗ್ರಹಣೆಗೆ ಹೋಲಿಸಿದರೆ ಅವರೊಡನೆ ಹೋದಾಗ ಆದ ಹಣ ಸಂಗ್ರಹಣೆ  ತುಂಬಾ ಸರಳ ಮತ್ತು ಆಕರ್ಷಕದಾಯಕವಾಗಿತ್ತು.

ನನಗಾದ ಆಶ್ಚರ್ಯವೆಂದರೆ ಆ ಮನೆಗಳವರಿಗೆಲ್ಲಾ ನಾನು ಶೃಂಗೇರಿ ಕಾಲೇಜಿನಲ್ಲಿ Rank ಪಡೆದವನೆಂದು ಮೊದಲೇ ಗೊತ್ತಿತ್ತು. ನಾನು ಮಾತನಾಡುವ ಪ್ರಸಂಗವೇ ಬರಲಿಲ್ಲ. ಭಟ್ ಅವರು ನಮ್ಮ ಭೇಟಿಯ ಉದ್ದೇಶ ಹೇಳುತ್ತಿದ್ದಂತೆಯೇ ಮನೆಯ ಯಜಮಾನರಿಂದ ಕೊಡುಗೆ ಅವರ ಕೈಯಲ್ಲಿ ಬರತೊಡಗಿತು. ಕನಿಷ್ಠ ಕೊಡುಗೆ ೫೦ ರೂಪಾಯಿ ಆಗಿತ್ತು. ಒಟ್ಟಿನಲ್ಲಿ ಭಟ್ ಅವರ ಕೊಡುಗೆಯೂ ಸೇರಿ ಸುಮಾರು ೫೦೦ ರೂಪಾಯಿಗಳು ನನ್ನ ಕೈ ಸೇರಿದವು. ಆ ಕಾಲಕ್ಕೆ ಅದೇನು ಸಾಮಾನ್ಯ ಮೊತ್ತವಾಗಿರಲಿಲ್ಲ.

ಭಟ್ ಅವರು ನನಗೆ  ಇನ್ನೊಂದು ರೀತಿಯಲ್ಲೂ ಸಹಾಯ ಮಾಡಿದರು. ನಾವು ಭೇಟಿ ಮಾಡಿದ ಒಂದು ಕುಟುಂಬದವರ ಮಗನೊಬ್ಬ ಟಾಟಾ ಇನ್ಸ್ಟಿಟ್ಯೂಟಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಓದುತ್ತಿದ್ದ. ನನಗೆ ಅವನ ಪರಿಚಯ ಮಾಡಿಸಿದ್ದರಿಂದ ಅವನಿಂದ ಇನ್ಸ್ಟಿಟ್ಯೂಟಿನಲ್ಲಿ ಅಭ್ಯಾಸದ ಬಗ್ಗೆ ಮತ್ತು ಹಾಸ್ಟೆಲ್ ಇತ್ಯಾದಿ ಸೌಕರ್ಯಗಳ ಬಗ್ಗೆ ವಿವರಗಳು ನನಗೆ ದೊರೆತವು. ಇನ್ನೊಂದು ಕುಟುಂಬದವರ  (ಪ್ರಾಯಶಃ ಕರೀಮನೆ  ರಂಗರಾಯರ)  ಅಳಿಯ ಐ ಐ ಟಿ ಕಾನ್ಪುರದಲ್ಲಿ ಪ್ರೊಫೆಸರ್ ಆಗಿದ್ದರು. ಭಟ್ ಅವರು ನನಗೆ ಅವರ ಪರಿಚಯವನ್ನು ಮಾಡಿಸಿದರು. ಅವರಿಂದ ತುಂಬಾ ವಿಷಯಗಳು ನನಗೆ ಗೊತ್ತಾದವು. ಒಟ್ಟಿನಲ್ಲಿ ಹೇಳಬೇಕೆಂದರೆ ಭಟ್ ಅವರು ನನಗೆ ಕೇವಲ ಹಣಕಾಸಿನ ಸಹಾಯ ದೊರೆಯುವಂತೆ ಮಾಡಿದ್ದಲ್ಲ ಬೇರೆ ವಿಧಗಳಲ್ಲೂ ನನ್ನ ಜ್ಞಾನ ಹೆಚ್ಚಾಗುವಂತೆ ಮಾಡಿದರು. ಒಟ್ಟಿನಲ್ಲಿ ಭಟ್ ಅವರು ಯಾವುದೇ ವೈಯ್ಯಕ್ತಿಕ ಪ್ರಚಾರವಿಲ್ಲದೇ ನನಗೆ ಅಮೂಲ್ಯ  ಸಹಾಯ ಮಾಡಿದ್ದರು. ಕೇವಲ ಅವರ ಕುಟುಂಬ ಮತ್ತು ನಮ್ಮ ಕುಟುಂಬದವರನ್ನು ಬಿಟ್ಟರೆ ಬೇರೆ ಯಾರಿಗೂ ಅವರಿಂದ ನನಗಾದ ಸಹಾಯದ ಅರಿವಾಗಲಿಲ್ಲ. ತುಂಬಾ ಅಪರೂಪದ ವ್ಯಕ್ತಿತ್ವದ ಭಟ್ ಅವರನ್ನು ನಾನು ನನ್ನ ಜೀವಮಾನ ಪರ್ಯಂತ ಮರೆಯಲಾರೆ.

----ಮುಂದುವರಿಯುವುದು ---




Tuesday, July 21, 2020

ಬಾಲ್ಯ ಕಾಲದ ನೆನಪುಗಳು – ೧೦೨

ನನ್ನ ವಿದ್ಯಾಭ್ಯಾಸ ಸಮಯದಲ್ಲಿ ಯಾವಾಗಲೂ ನನಗೆ ಭೌತಶಾಸ್ತ್ರ (ಫಿಸಿಕ್ಸ್) ಸಬ್ಜೆಕ್ಟಿನಲ್ಲಿ ವಿಶೇಷ ಆಸಕ್ತಿ ಇತ್ತು. ಮ್ಯಾಥಮ್ಯಾಟಿಕ್ಸ್ ಬಿಟ್ಟರೆ ಈ ಸಬ್ಜೆಕ್ಟಿನಲ್ಲಿ ನನಗೆ ಹೆಚ್ಚಿನ ಅಂಕಗಳು ದೊರೆಯುತ್ತಿದ್ದವು. ಕೃಷ್ಣಪ್ಪಯ್ಯನವರ ನೇತೃತ್ವದಲ್ಲಿ ನಮ್ಮ ಕಾಲೇಜಿನಲ್ಲಿ ಈ ಡಿಪಾರ್ಟ್ಮೆಂಟ್ ತುಂಬಾ ಒಳ್ಳೆಯ ಅಧ್ಯಾಪಕರುಗಳನ್ನು ಹೊಂದಿತ್ತು.

ನನ್ನ ಮತ್ತು ಕೃಷ್ಣಪ್ಪಯ್ಯನವರ ನಡುವಿನ ಸಂಬಂಧ ಸ್ವಲ್ಪ ವಿಶಿಷ್ಟವಾದದ್ದೇ ಆಗಿತ್ತು. ಅವರ "ನೋ-ನಾನ್ಸೆನ್ಸ್" ವರ್ತನೆ ಅಥವಾ ಮನೋಭಾವ ನನಗೆ ತುಂಬಾ ಇಷ್ಟವಾಗುತ್ತಿತ್ತು. ವಿಚಿತ್ರವೆಂದರೆ ನಮಗೆಲ್ಲಾ ಕೃಷ್ಣಪ್ಪಯ್ಯ ಎಂಬ ಹೆಸರಿನವರು ನಮ್ಮ ಕಾಲೇಜಿಗೆ ಫಿಸಿಕ್ಸ್ ಉಪನ್ಯಾಸಕರಾಗಿ ಬರುತ್ತಾರೆಂದು ತಿಳಿದಾಗ ಸ್ವಲ್ಪ ಗಜಿಬಿಜಿಯೇ ಆಯಿತು. ಏಕೆಂದರೆ ಆ ಹೆಸರು ಕೇಳಿದೊಡನೆ ನಮಗೆ ಕೂಡಲೇ ನೆನಪಿಗೆ ಬಂದುದು ತೀರ್ಥಹಳ್ಳಿಯ ಆ ಕಾಲದ ಅತಿ ಪ್ರಸಿದ್ಧ ಹೋಟೆಲೊಂದರ ಮಾಲೀಕರದ್ದು.  ಒಂದು ಕಾಲದಲ್ಲಿ ತೀರ್ಥಹಳ್ಳಿಯ ಕೃಷ್ಣಪ್ಪಯ್ಯನವರ ಹೋಟೆಲ್ ಬೆಂಗಳೂರಿನ ಎಂ ಟಿ ಆರ್ ಹೋಟೆಲಿನಷ್ಟೇ ಪ್ರಸಿದ್ಧವಾಗಿತ್ತು. ನಾವಿನ್ನೂ ಚಿಕ್ಕವರಾಗಿದ್ದಾಗ ಪುರದಮನೆ ಶ್ರೀನಿವಾಸಯ್ಯನವರ ಕುಟುಂಬದೊಡನೆ ವ್ಯಾನ್ ಒಂದರಲ್ಲಿ ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಉತ್ಸವದಲ್ಲಿ ಪಾಲ್ಗೊಂಡು ಕೃಷ್ಣಪ್ಪಯ್ಯನವರ ಹೋಟೆಲಿನ ಮಸಾಲೆ ದೋಸೆ ರುಚಿ ನೋಡಿದ್ದನ್ನು ಎಂದೂ ಮರೆಯುವಂತಿಲ್ಲ.

ನಮ್ಮ ಮನಸ್ಸಿನಲ್ಲಿ ನಾವು ಹೋಟೆಲ್ ಮಾಲೀಕರಾದ ಕೃಷ್ಣಪ್ಪಯ್ಯನವರಂತೆಯೇ  ನಮ್ಮ ಉಪನ್ಯಾಸಕ ಕೃಷ್ಣಪ್ಪಯ್ಯನವರೂ ಕೂಡ ಒಬ್ಬ ಅಡ್ಡಪಂಚೆ ಉಟ್ಟ ಮಧ್ಯಮ ವಯಸ್ಸಿನ ವ್ಯಕ್ತಿ ಇರಬೇಕೆಂದು ಭಾವಿಸಿಬಿಟ್ಟಿದ್ದೆವು.  ಆದರೆ ಇನ್ನೂ ತರುಣರಾಗಿ ಮೀಸೆ ಬಿಟ್ಟು ಟ್ರಿಮ್ಮಾಗಿ ಡ್ರೆಸ್ ಮಾಡಿ ನಮ್ಮೆದುರು ಪ್ರತ್ಯಕ್ಷರಾದ ವ್ಯಕ್ತಿಯೇ ನಮ್ಮ ಉಪನ್ಯಾಸಕ ಕೃಷ್ಣಪ್ಪಯ್ಯನವರೆಂದು ತಿಳಿದಾಗ ನಮಗಾದ ಆಶ್ಚರ್ಯ ಮತ್ತು ಸಂತೋಷ ಅಷ್ಟಿಷ್ಟಲ್ಲ. ಅವರಾಗಲೇ ಮಣಿಪಾಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸುಮಾರು ಎರಡು ವರ್ಷ ಸೇವೆ ಮಾಡಿ ಶೃಂಗೇರಿಗೆ ಬಂದಿದ್ದರು. ಹಾಗಾಗಿ ಅವರು ತೆಗೆದುಕೊಂಡ ಮೊದಲ ತರಗತಿಯಲ್ಲೇ ಆವರೆಷ್ಟು ಉತ್ತಮ ಮಟ್ಟದ ಉಪನ್ಯಾಸಕರೆಂದು ನಮಗೆ ಗೊತ್ತಾಗಿ ಹೋಯಿತು. ಆದರೆ ಏಕೋ ಏನೋ ಗೊತ್ತಿಲ್ಲ. ನಮಗೆಲ್ಲಾ ಅವರು ತಮ್ಮ ಹೆಸರಿನಲ್ಲಿ ಸೇರಿದ್ದ "ಅಪ್ಪಯ್ಯ" ಎಂಬ ಪದವನ್ನು ತೆಗೆದುಹಾಕಿದರೆ ಒಳ್ಳೆಯದೆಂದು ಅನಿಸುತ್ತಿತ್ತು! ಏಕೆಂದರೆ ನಮ್ಮೂರಿನಲ್ಲಿ ಅದನ್ನು ಹಿರಿಯ ವಯಸ್ಸಿನವರ ಮುಂದೆ ಮಾತ್ರ ಸೇರಿಸಲಾಗುತ್ತಿತ್ತು. 

ಕೃಷ್ಣಪ್ಪಯ್ಯನವರಿಗೆ ಅವರು ಕ್ಲಾಸ್ ತೆಗೆದುಕೊಳ್ಳುತ್ತಿದ್ದ ವಿದ್ಯಾರ್ಥಿಗಳಲ್ಲದೇ ಬೇರೆ ತರಗತಿಯ ವಿದ್ಯಾರ್ಥಿಗಳೂ ತುಂಬಾ ಗೌರವ ಕೊಡುತ್ತಿದ್ದರು. ನಮ್ಮ ಕಾಲೇಜಿನಲ್ಲಿ ನಡೆಯುತ್ತಿದ್ದ ಸಮಾರಂಭಗಳಲ್ಲಿ ಮೈಕ್ ಸೆಟ್ಟಿನ ಜವಾಬ್ದಾರಿಯನ್ನು ಯಾವಾಗಲೂ ಅವರೇ ವಹಿಸುತ್ತಿದ್ದರು. ಮೂಲತಃ ಒಬ್ಬ ರಿಸರ್ವ್ಡ್ ಪರ್ಸನ್ ಅಗಿದ್ದ ಕೃಷ್ಣಪ್ಪಯ್ಯನವರು ತಮ್ಮ ಸಬ್ಜೆಕ್ಟ್ ಬಿಟ್ಟು ಬೇರೆ ಯಾವುದೇ ವಿಷಯ  ಮಾತನಾಡಲು ಹೋಗುತ್ತಿರಲಿಲ್ಲ. ನಾನು ಕೇವಲ ಒಂದೇ ಒಂದು ಸಂದರ್ಭದಲ್ಲಿ ಅವರೊಡನೆ ಸ್ವಲ್ಪ ಮನಸ್ತಾಪ ಮಾಡಿಕೊಂಡಿದ್ದೆ. ನನ್ನ ಅಂತಿಮ ಡಿಗ್ರಿ ವರ್ಷದ ಮೊದಲ ಟರ್ಮ್  ಪರೀಕ್ಷೆಯ ಉತ್ತರ (answer) ಪೇಪರ್ ಒಂದರಲ್ಲಿ  ಕರೆಕ್ಷನ್ ಮಾಡಿದ  ಮೇಲೆ ಟೋಟಲ್ ಮಾಡುವಾಗ ಅವರು ಒಂದು ಉತ್ತರಕ್ಕೆ ಕೊಟ್ಟ ೫ ಅಂಕಗಳನ್ನು ಸೇರಿಸಿರಲಿಲ್ಲ. ಹಾಗಾಗಿ ನನಗೆ ೫ ಅಂಕಗಳು ಕಡಿಮೆ ಬಂದಿದ್ದವು. ನಾನು ನನಗೆ ಬರಬೇಕಾಗಿದ್ದ ಅಂಕಗಳ ಬಗ್ಗೆ ತುಂಬಾ ಸೆನ್ಸಿಟಿವ್ ಆಗಿದ್ದೆ. ಆದ್ದರಿಂದ ನಾನು ತುಂಬಾ ಅಸಮಾಧಾನದಿಂದ ಆ ಪೇಪರ್ ತೆಗೆದುಕೊಂಡು ಕೃಷ್ಣಪ್ಪಯ್ಯನವರ ಬಳಿಗೆ ಹೋದೆ. ಅವರು ತಾಳ್ಮೆಯಿಂದ ಪೇಪರ್ ಪುನಃ ತಿರುವಿ ನೋಡಿ ಕೈಬಿಟ್ಟಿದ್ದ ೫ ಅಂಕಗಳನ್ನು ಸೇರಿಸಿ ನನಗೆ ಕೊಟ್ಟಿದ್ದ ಟೋಟಲ್ ಅಂಕಗಳನ್ನು ಬದಲಾಯಿಸಿದರು. ಆದರೆ ಪೇಪರ್ ನನಗೆ ಹಿಂದಿರುಗಿಸುವಾಗ, ೫ ಅಂಕಗಳ ವ್ಯತ್ಯಾಸ ಸರಿಮಾಡದಿದ್ದರಿಂದ ಅಂತಹ ದೊಡ್ಡ ಪ್ರಮಾದವೇನೂ ಜರುಗಿದಂತಾಗುತ್ತಿರಲಿಲ್ಲವೆಂದು ಸ್ವಲ್ಪ ವ್ಯಂಗವಾಗಿಯೇ ಹೇಳಿಬಿಟ್ಟರು. ನನಗೆ ಆಗ ತುಂಬಾ ಕೋಪ ಬಂದು ಬಿಟ್ಟಿತು. ನಾನು ಸಿಟ್ಟಿನಿಂದ ನನ್ನ ವಿಷಯದಲ್ಲಿ ಅದು ದೊಡ್ಡ  ಪ್ರಮಾದವೇ ಹೌದು. ಏಕೆಂದರೆ ನನಗೆ ೫ ಅಂಕಗಳು ಕೂಡ ಬಹು ಮುಖ್ಯವೇ ಎಂದು ಗಟ್ಟಿಯಾಗಿ ಹೇಳಿದೆ. ಆದರೆ ಕೃಷ್ಣಪ್ಪಯ್ಯನವರು ತಾಳ್ಮೆ ಕಳೆದುಕೊಳ್ಳದೇ ಮೌನವಾಗಿದ್ದರು.

ಆದರೆ ಆಮೇಲೆ ಸ್ವಲ್ಪ ಸಮಯದಲ್ಲೇ ನನಗೆ ತುಂಬಾ ಪಶ್ಚಾತ್ತಾಪವಾಯಿತು. ನನ್ನ ಅತ್ಯಂತ ಮೆಚ್ಚಿನ ಗುರುಗಳ ಮುಂದೆ ನಾನು ತುಂಬಾ ಒರಟಾಗಿ ಮಾತನಾಡಿಬಿಟ್ಟಿದ್ದೆ.  ಒಂದು ಸಣ್ಣ ವಿಷಯಕ್ಕೆ ನಾನು ಅವರೊಡನೆ ಮನಸ್ತಾಪವಾಗುವಂತೆ ಮಾತನಾಡಿಬಿಟ್ಟಿದ್ದೆ. ನಾನು ಕೂಡಲೇ ಅವರ ಹತ್ತಿರ ಹೋಗಿ ಕ್ಷಮಾಪಣೆ ಕೇಳಿಕೊಂಡೆ. ಅವರು ನನ್ನನ್ನು ಸಮಾಧಾನಪಡಿಸಿ ಆ ವಿಷಯವನ್ನು ಅಲ್ಲಿಗೇ ಮರೆತುಬಿಡುವಂತೆ ಹೇಳಿದರು.

ಬಾಳೆಹೊನ್ನೂರ್ ಕಾಫಿ ರಿಸರ್ಚ್ ಸ್ಟೇಷನ್ ಗೆ ಪಿಕ್ನಿಕ್

ನಮ್ಮ ಕಾಲೇಜಿನಿಂದ ಕೃಷ್ಣಪ್ಪಯ್ಯನವರ ನೇತೃತ್ವದಲ್ಲಿ ಬಾಳೆಹೊನ್ನೂರ್ ಕಾಫಿ ರಿಸರ್ಚ್ ಸ್ಟೇಷನ್ ಗೆ ಒಂದು ಪಿಕ್ನಿಕ್ ಏರ್ಪಡಿಸಲಾಗಿತ್ತು. ನಾವು ಅಲ್ಲಿಯವರೆಗೆ ಬಾಳೆಹೊನ್ನೂರಿನಲ್ಲಿ ಕಾಫಿ ರಿಸರ್ಚ್ ಇನ್ಸ್ಟಿಟ್ಯೂಟ್ ಇರುವುದೆಂದು ಕೇಳಿದ್ದು ಮಾತ್ರವಾಗಿತ್ತು. ಆದರೆ ಈ ಪಿಕ್ನಿಕ್ ನಮಗೆ ಅದನ್ನು ನೋಡುವ ಮತ್ತು ಅದರ ಬಗ್ಗೆ ವಿವರಗಳನ್ನು ತಿಳಿದುಕೊಳ್ಳುವ ಒಂದು ಸದವಕಾಶವಾಗಿತ್ತು. ಅಲ್ಲದೇ ಆಗ ನಮ್ಮ ಕಾಲೇಜಿನ ವಿದ್ಯಾರ್ಥಿಯಾಗಿದ್ದ ವಿದ್ಯಾನಂದ ಶೆಣೈ ಎಂಬುವರ ಒಬ್ಬ ಸಹೋದರ ಅಲ್ಲಿಯೇ ಕೆಲಸ ಮಾಡುತ್ತಿದ್ದರು . ಅವರು ನಮ್ಮನ್ನು ಇನ್ಸ್ಟಿಟ್ಯೂಟ್ ಒಳಗೆಲ್ಲಾ ಸುತ್ತಾಡಿಸಿ ಅಲ್ಲಿನ ಕಾರ್ಯ ವೈಖರಿಯ ಬಗ್ಗೆ ಸೂಕ್ತ ವಿವರಣೆ ನೀಡಿದರು . (ನನ್ನ ಸ್ನೇಹಿತರೂ ಆಗಿದ್ದ ವಿದ್ಯಾನಂದ ಶೆಣೈ ಅವರು ಮುಂದೆ ಆರ್ ಎಸ್ ಎಸ್ ಸಂಸ್ಥೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು).

ತುಂಬಾ ಯಶಸ್ವಿಯಾಗಿ ನಡೆದ ಈ ಪಿಕ್ನಿಕ್ ನಮಗೆಲ್ಲಾ ತುಂಬಾ ಸಂತೋಷವನ್ನು ತಂದಿತು. ಪಿಕ್ನಿಕ್ ನಡುವೆ ಮದ್ಯಾಹ್ನದ ಊಟಕ್ಕೆ ಮುಂಚೆ ಒಂದು ಹಾಡಿನ ಸ್ಪರ್ಧೆ ನಡೆಸಲಾಯಿತು. ಆ ಸ್ಪರ್ಧೆಯ ನಡುವೆ ವಿದ್ಯಾರ್ಥಿನಿಯರ ಗುಂಪೊಂದು "ಉಂಡಾಡಬಹುದು, ಓಡಿಬಾ ಎನ್ನಪ್ಪಾ, ಊಟಕೆ ಬಾರೋ ಕೃಷ್ಣಪ್ಪಾ " ಎಂಬ ಹಾಡನ್ನು ಹಾಡುತ್ತಾ ಕೃಷ್ಣಪ್ಪಯ್ಯನವರ ಕಡೆ ಕೈ ತೋರಿಸಿದಾಗ ನಮಗೆಲ್ಲಾ ಬಂದ ನಗೆ ಅಷ್ಟಿಷ್ಟಲ್ಲ! ಆಗ ಕೃಷ್ಣಪ್ಪಯ್ಯನವರ ಮುಖದಲ್ಲೂ ಮುಗುಳ್ನಗೆ ಕಾಣಿಸಿದ್ದು ಇಂದೂ ನೆನಪಿಗೆ ಬರುತ್ತಿದೆ.

ಟಾಟಾ ಇನ್ಸ್ಟಿಟ್ಯೂಟ್ ಸೀಟಿಗೆ ಪ್ರಯತ್ನಿಸಲು ಕೃಷ್ಣಪ್ಪಯ್ಯನವರ ಸಲಹೆ

ನಮ್ಮಕಾಲೇಜಿನ ಶೈಕ್ಷಣಿಕ ವರ್ಷ ಮುಗಿಯುತ್ತಾ ಬರುತ್ತಿದ್ದಂತೇ ಒಂದು ದಿನ ಕೃಷ್ಣಪ್ಪಯ್ಯನವರು ನನಗೆ ಅವರ ಮನೆಗೆ ಬರಹೇಳಿದರು. ಬ್ರಹ್ಮಚಾರಿಯಾಗೇ ಉಳಿದಿದ್ದ ಅವರು ತಮ್ಮ ಇನ್ನೊಬ್ಬ ಸಹೋದ್ಯೋಗಿಯೊಡನೆ ಒಂದು ಮನೆಯಲ್ಲಿ ವಾಸಮಾಡುತ್ತಿದ್ದರು. ನಾನಲ್ಲಿಗೆ ಹೋದಾಗ ತುಂಬಾ ಆರಾಮದಲ್ಲಿ ನನ್ನೊಡನೆ ಮಾತನಾಡಿದರು. ಅವರಿಗೆ ನನ್ನ ಮುಂದಿನ ವಿದ್ಯಾಭ್ಯಾಸದ ಗುರಿ ಮತ್ತು ಪ್ಲಾನ್ ಏನೆಂದು ತಿಳಿದುಕೊಳ್ಳಬೇಕಿತ್ತು. ಸತ್ಯ ಹೇಳಬೇಕೆಂದರೆ ನನ್ನ ಮುಂದಿನ ಗುರಿ ಏನೆಂದು ನನಗೇ ಗೊತ್ತಿರಲಿಲ್ಲ. ನಮ್ಮ ಕುಟುಂಬದ ಆರ್ಥಿಕ ಸ್ಥಿತಿ ಕಷ್ಟಕಾರವಾಗಿಯೇ ಇದ್ದರಿಂದ ನನ್ನ ಮುಂದಿನ ಬಾಳ  ಪಯಣ ತುಂಬಾ ಮಸುಕು ಮಸುಕಾಗಿಯೇ ಕಾಣುತ್ತಿತ್ತು. ನನ್ನ ಒಂದು ಗುರಿ ಫಿಸಿಕ್ಸ್ ಸಬ್ಜೆಕ್ಟಿನಲ್ಲಿ ಸ್ನಾತಕೋತ್ತರ ಪದವಿ ಪಡೆಯುವುದಾಗಿತ್ತು. ನಾನು ಅದನ್ನೇ ಕೃಷ್ಣಪ್ಪಯ್ಯನವರಿಗೆ ಹೇಳಿದೆ.

ಕೃಷ್ಣಪ್ಪಯ್ಯನವರು ತಮ್ಮ ಬೀರುವಿನಿಂದ ಒಂದು ಪುಸ್ತಕವನ್ನು ಹೊರತೆಗೆದು ನನ್ನ ಕೈಗಿತ್ತರು. ಅದು ಇಂಡಿಯನ್ ಇನ್ಸ್ಟಿಟ್ಯೂಟ್  ಅಫ್ ಸೈನ್ಸ್ (ಟಾಟಾ ಇನ್ಸ್ಟಿಟ್ಯೂಟ್ ಎಂದು ಪ್ರಸಿದ್ಧಿ ಪಡೆದ)  ಪ್ರಾಸ್ಪೆಕ್ಟಸ್ ಆಗಿತ್ತು. ಇನ್ಸ್ಟಿಟ್ಯೂಟಿನ ಬಗ್ಗೆ ಮತ್ತು ಅಲ್ಲಿನ ಕೋರ್ಸ್ ಗಳ  ಬಗ್ಗೆ  ಎಲ್ಲಾ ವಿವರಗಳನ್ನು ಹೊಂದಿದ್ದ ಆ ಪುಸ್ತಕದ ಮೇಲೆ ನಾನು ಒಮ್ಮೆ ಕಣ್ಣಾಡಿಸಿದೆ. ಕೃಷ್ಣಪ್ಪಯ್ಯನವರು ನನಗೆ ನನ್ನ ಮುಂದಿನ ವಿದ್ಯಾಭ್ಯಾಸವನ್ನು ಇನ್ಸ್ಟಿಟ್ಯೂಟಿನಲ್ಲಿ ಮಾಡಬೇಕೆಂದು ಸಲಹೆ ಮಾಡಿದರು. ಟಾಟಾ ಇನ್ಸ್ಟಿಟ್ಯೂಟಿನಲ್ಲಿ ಆಗ ಬಿ.ಎಸ್ ಸಿ.  ಪದವಿ ಪಡೆದ ವಿದ್ಯಾರ್ಥಿಗಳಿಗೆ ಮೂರು ಇಂಜಿನಿಯರಿಂಗ್ ಕೋರ್ಸ್ ಗಳಿದ್ದುವು. ಮೆಟಲರ್ಜಿ, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್ ಎಂಬ ಮೂರು ವಿಭಾಗಗಳಲ್ಲಿ ಒಂದನ್ನು ಆರಿಸಿಕೊಳ್ಳಬಹುದಿತ್ತು. ಒಂದೊಂದು ವಿಭಾಗದಲ್ಲೂ ಅಖಿಲ ಭಾರತ ಮಟ್ಟದಲ್ಲಿ ೩೦ ವಿದ್ಯಾರ್ಥಿಗಳಿಗೆ ಸೀಟ್ ದೊರೆಯುತ್ತಿತ್ತು.

ಕೃಷ್ಣಪ್ಪಯ್ಯನವರು ನನಗೆ ಮೆಟಲರ್ಜಿ ಕೋರ್ಸ್ ಆಯ್ಕೆ ಮಾಡಿಕೊಳ್ಳಲು ಸಲಹೆ ಮಾಡಿದರು. ನಾನು ಬಿ.ಎಸ್ ಸಿ.   ಓದುವಾಗ ಫಿಸಿಕ್ಸ್ ಮತ್ತು ಕೆಮಿಸ್ಟ್ರಿ ಮೇಜರ್ ಸಬ್ಜೆಕ್ಟುಗಳಾಗಿ ತೆಗೆದುಕೊಂಡಿದ್ದರಿಂದ ಆ ಕೋರ್ಸಿಗೆ ಅರ್ಹತೆ ಪಡೆದಿದ್ದೆ. ಅವರ ಪ್ರಕಾರ ಮೂರು ವರ್ಷದ ಕೋರ್ಸ್ ನಲ್ಲಿ ಒಟ್ಟಾರೆ ಡಿಸ್ಟಿಂಕ್ಷನ್ ಪಡೆದುಕೊಂಡರೆ ಅಮೇರಿಕಾಕ್ಕೆ ಹೋಗುವ ಅವಕಾಶ ದೊರೆಯಲಿತ್ತು. ಆ ಕಾಲದಲ್ಲಿ ಮೆಟಲರ್ಜಿ ಇಂಜಿನಿಯರ್ ಗಳಿಗೆ ಅಲ್ಲಿ ತುಂಬಾ ಡಿಮ್ಯಾಂಡ್ ಮತ್ತು ಅವಕಾಶಗಳಿದ್ದವಂತೆ. ಒಂದು ವೇಳೆ ಡಿಸ್ಟಿಂಕ್ಷನ್ ದೊರೆಯದಿದ್ದರೆ ಟಾಟಾ ಸ್ಟೀಲ್ ಕಂಪನಿಯಿಂದ ನೌಕರಿಯ ಗ್ಯಾರಂಟಿ ಇತ್ತಂತೆ. ಆಗ ಟಾಟಾ ಇನ್ಸ್ಟಿಟ್ಯೂಟ್ ಬಿಟ್ಟರೆ ಬನಾರಸ್ ಹಿಂದೂ ಯೂನಿವರ್ಸಿಟಿ ಯಲ್ಲಿ ಮಾತ್ರ ಮೆಟಲರ್ಜಿ ಇಂಜಿನಿಯರಿಂಗ್ ಕೋರ್ಸ್ ಇತ್ತಂತೆ. ಕೃಷ್ಣಪ್ಪಯ್ಯನವರು ನನಗೆ ಪ್ರಾಸ್ಪೆಕ್ಟಸ್  ಇಟ್ಟುಕೊಳ್ಳುವಂತೆ ಹೇಳಿ ಟಾಟಾ ಇನ್ಸ್ಟಿಟ್ಯೂಟ್ ನಲ್ಲಿ ಪ್ರವೇಶಕ್ಕೆ ಪ್ರಯತ್ನ ಮಾಡುವಂತೆ ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹಿಂದೂ ತತ್ವಶಾಸ್ತ್ರದ ಡಿಪಾರ್ಟ್ಮೆಂಟ್

ಆ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಒಂದು ಸಮಾಚಾರ ನಮ್ಮ ಕಿವಿಗೆ ಬಿತ್ತು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಒಂದು ಹಿಂದೂ ತತ್ವಶಾಸ್ತ್ರದ ಡಿಪಾರ್ಟ್ಮೆಂಟ್  ಸ್ಥಾಪಿಸಿ ಅದರಲ್ಲಿ ಸ್ನಾತಕೋತ್ತರ ತರಗತಿಯೊಂದನ್ನು ಆರಂಭಿಸಲು ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ ಅನುಮತಿ ನೀಡಿತ್ತು. ಆ ಇಲಾಖೆಯ ಮುಖ್ಯಸ್ಥರನ್ನಾಗಿ ನೇಮಿಸಲು ಹಿಂದೂ ತತ್ವಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ವ್ಯಕ್ತಿಯೊಬ್ಬರ ಅವಶ್ಯಕತೆ ಇತ್ತು.  ವಿಶ್ವವಿದ್ಯಾನಿಲಯದವರಿಗೆ ಅಂತಹ ಅಭ್ಯರ್ಥಿಗಳ ಪಟ್ಟಿ ತಯಾರಿಸುವ ಅವಶ್ಯಕತೆಯೇ ಬರಲಿಲ್ಲ. ಅವರು ನೇರವಾಗಿ ನಮ್ಮ ಪ್ರಿನ್ಸಿಪಾಲರಾದ ರಾಮಕೃಷ್ಣರಾಯರಿಗೆ ನೇಮಕಾತಿಯ ಪತ್ರವನ್ನೇ ಕಳಿಸಿಬಿಟ್ಟಿದ್ದರು. ಅವರು ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ಚಾರ್ಜ್ ತೆಗೆದುಕೊಳ್ಳಬೇಕಾಗಿತ್ತು.

ನಮ್ಮ ಬಿ.ಎಸ್ ಸಿ.  ಡಿಗ್ರಿಯ ಅಂತಿಮ ಪರೀಕ್ಷೆಗಳು ೧೯೬೯ನೇ ಇಸವಿಯ ಮಾರ್ಚ್ ತಿಂಗಳಿನ ಕೊನೆಯ ವಾರದಲ್ಲಿ ಆರಂಭಗೊಂಡವು. ನಾನು ಫಿಸಿಕ್ಸ್ ಸಬ್ಜೆಕ್ಟಿನ ಎಲ್ಲಾ ಪ್ರಶ್ನೆ ಪತ್ರಿಕೆಗಳಿಗೂ ಚೆನ್ನಾಗಿ ಉತ್ತರ ಬರೆದೆ ಮತ್ತು ಪ್ರಾಕ್ಟಿಕಲ್ ಪರೀಕ್ಷೆ ಕೂಡ ತೃಪ್ತಿಕರವಾಗಿಯೇ ನಡೆಯಿತು. ಆದರೆ ಕೆಮಿಸ್ಟ್ರಿ ಪ್ರಶ್ನೆ ಪತ್ರಿಕೆಗಳಿಗೆ ನಾನು ಬರೆದ ಉತ್ತರಗಳು ನನಗಷ್ಟು ತೃಪ್ತಿ ನೀಡಲಿಲ್ಲ. ಆದರೆ ಪ್ರಾಕ್ಟಿಕಲ್ ಪರೀಕ್ಷೆಯಲ್ಲಿ ನಾನು ತುಂಬಾ ಚೆನ್ನಾಗಿಯೇ ಕಾರ್ಯ ನಿರ್ವಹಣೆ ಮಾಡಿದ್ದೆ. 

----ಮುಂದುವರಿಯುವುದು ---