Monday, April 6, 2020

ಬಾಲ್ಯ ಕಾಲದ ನೆನಪುಗಳು – ೭೬


ಮಾಮೂಲಿನಂತೆ ಜೂನ್ ತಿಂಗಳ ಮೊದಲ ವಾರ ನಾನು ಅರುಣಾಚಲಂ ಮೇಷ್ಟ್ರ ಮನೆಯಲ್ಲಿದ್ದೆ.  ಈ ಬಾರಿ ನಾನು ಮೇಷ್ಟ್ರ ಒಂದು ತಿಂಗಳ ಚಾರ್ಜ್ ಆದ  ೩೦ ರೂಪಾಯಿಗಳನ್ನು ಪಾವತಿ ಮಾಡಿಯೇ ಜುಲೈ ತಿಂಗಳ ಮೊದಲ ವಾರ ಎರಡು ತಿಂಗಳ ಫೀ  ಕಟ್ಟಿ ಹಾಸ್ಟೆಲ್ ಸೇರಿ ಬಿಟ್ಟೆ. ಆ ವರ್ಷ ಹಾಸ್ಟೆಲಿನ ವಿದ್ಯಾರ್ಥಿಗಳಿಗಾಗಿ ಬೇರೆ ಕಟ್ಟಡ ಬಾಡಿಗೆಗೆ ತೆಗೆದುಕೊಳ್ಳುವ ಅವಶ್ಯಕತೆ ಬರಲಿಲ್ಲ. ನನಗೆ ರೂಮ್ ನಂಬರ್ ೧೦ ರಲ್ಲಿ ಇರಲು ಅವಕಾಶ ಕೊಡಲಾಯಿತು. ಮತ್ತೂರಿನ ಅನಂತ, ಸಾಗರದ ನಾಗರಾಜರಾವ್ ಬಾಪಟ್ ಮತ್ತು ಹೊಸನಗರ ತಾಲೂಕ್ ಕೋಡೂರಿನ ಚಂದ್ರಶೇಖರ ಅವರು ನನ್ನ ರೂಮ್ ಮೇಟ್  ಆಗಿದ್ದರು. ಇನ್ನೊಬ್ಬನ ಹೆಸರು ಈಗ ನೆನಪಿಗೆ ಬರುತ್ತಿಲ್ಲ.

ನಾವು ಎಸ್ ಎಸ್ ಎಲ್ ಸಿ ತರಗತಿಗೆ ಬರುತ್ತಿದ್ದಂತೇ ಶಾಲೆಯ ಹಿರಿಯ ವಿಧ್ಯಾರ್ಥಿಗಳೆಂದು ನಮ್ಮ ಮಟ್ಟ ಮೇಲೆ ಏರಿ ಹೋಯಿತು. ಕಿರಿಯ ವಿದ್ಯಾರ್ಥಿಗಳು ಕೂಡ ನಮ್ಮನ್ನು ಹೆಚ್ಚು ಗೌರವದಿಂದ ನೋಡತೊಡಗಿದರು. ನಮ್ಮ ಬಾಡಿ ಲ್ಯಾಂಗ್ವೇಜ್ ಕೂಡ ಒಂದು ಉನ್ನತ ಮಟ್ಟದ್ದಾಗಿ ಹೋಯಿತು. ನಮಗೆ ಒಂದು ರೀತಿಯಲ್ಲಿ ತುಂಬಾ ಹೆಮ್ಮೆ ಎನಿಸ ತೊಡಗಿತು.

ಐ ರಿಮೆಂಬರ್, ಐ ರಿಮೆಂಬರ್, ದಿ ಹೌಸ್ ವೇರ್ ಐ ವಾಸ್ ಬಾರ್ನ್
ನಮ್ಮ ಹೆಡ್ ಮಾಸ್ಟರ್ ಶ್ರೀನಿವಾಸಮೂರ್ತಿಯವರು ಮೂರು ಸ್ನಾತಕೋತ್ತರ ಪದವಿಗಳನ್ನು (ಎಂ ಎ, ಎಂ ಕಾಂ ಮತ್ತು ಎಂ ಎಡ್ ) ಹೊಂದಿದ್ದರೆಂದು ನಾನು ಈ ಹಿಂದೆಯೇ ಬರೆದಿದ್ದೇನೆ. ಅವರು ನಮಗೆ ಇಂಗ್ಲಿಷ್ ಸಬ್ಜೆಕ್ಟಿನಲ್ಲಿ ಕೆಲವು ಪಾಠಗಳನ್ನು ಮಾಡಲಾರಂಭಿಸಿದರು. ಅವರು ಮಾಡಿದ  ಪಾಠಗಳಲ್ಲಿ ನನಗೆ ಇಂದಿಗೂ ನೆನಪು ಬರುವುದು ಇಂಗ್ಲಿಷ್ ಕವಿ ಥಾಮಸ್ ಹುಡ್ ಬರೆದ  "ಐ ರಿಮೆಂಬರ್, ಐ ರಿಮೆಂಬರ್, ದಿ ಹೌಸ್ ವೇರ್ ಐ ವಾಸ್ ಬಾರ್ನ್ "ಎಂಬ  ಕವನ. ನಮ್ಮ ಬಾಲ್ಯ ಕಾಲವನ್ನು ನೆನಪಿಗೆ ತರುವ ಈ ಕವನವನ್ನು ಶ್ರೀನಿವಾಸಮೂರ್ತಿಯವರು ಅತ್ಯಂತ ಹೃದಯಂಗಮವಾಗಿ ವಿವರಿಸಿದ್ದರು. ನಮ್ಮ ಮಾಮೂಲಿ ಇಂಗ್ಲಿಷ್ ಮೇಷ್ಟ್ರಾಗಿದ್ದ ಕೆ ಸುಬ್ರಹ್ಮಣ್ಯಂ ಕೂಡ ತುಂಬಾ ಒಳ್ಳೆಯ ಮೇಷ್ಟ್ರೇ ಆಗಿದ್ದರು. ನಮಗೆ ಎಷ್ಟೋ ಬಾರಿ ಶ್ರೀನಿವಾಸಮೂರ್ತಿಯವರು ಕಾಲೇಜು ಪ್ರೊಫೆಸರ್ ಆಗಬೇಕಾಗಿದ್ದವರು ಕೇವಲ ಹೆಡ್ಮಾಸ್ಟರ್ ಪದವಿಯಲ್ಲಿ ಏಕೆ ತೃಪ್ತಿ ಪಡೆಯುತ್ತಿದ್ದರೆಂದು ಅರ್ಥವಾಗುತ್ತಿರಲಿಲ್ಲ. ಮುಂದೆ ಅವರು ನ್ಯಾಷನಲ್ ಕಾಲೇಜಿನ ಮೊದಲ ಪ್ರಿನ್ಸಿಪಾಲರಾಗಿ ನಿವೃತ್ತರಾದರು.

ನಾನು ಬಯಸದ ಒಂದು ಪೈಪೋಟಿ
ನನಗೆ ನಮ್ಮ ರೂಮ್ ಮೇಟ್ ಒಬ್ಬನಿಂದ ನಾನು ಯಾವ ರೀತಿಯೂ  ಬಯಸದ  ಒಂದು ಪೈಪೋಟಿ ಪ್ರಾರಂಭವಾಯಿತು. ಸಾಗರದ ನಾಗರಾಜರಾವ್ ಬಾಪಟ್ ಎಂಬ ಈ ವಿದ್ಯಾರ್ಥಿ ನಮ್ಮಶಾಲೆಯಲ್ಲೇ ನಮ್ಮ ತರಗತಿಯಲ್ಲೇ ಕನ್ನಡ ಮೀಡಿಯಂನಲ್ಲಿ ಓದುತ್ತಿದ್ದ. ತುಂಬಾ ಬುದ್ಧಿವಂತನೇ ಆದ ಈ ವಿದ್ಯಾರ್ಥಿಗೆ ತಾನು ಕನ್ನಡ ಮೀಡಿಯಂನಲ್ಲಿ ಓದುತ್ತಿದ್ದು ನಾನು ಇಂಗ್ಲಿಷ್ ಮೀಡಿಯಂನಲ್ಲಿ ಓದುತ್ತಿರುವುದು ಒಂದು ಬಗೆಯ ಕೀಳರಿಮೆ ತಂದಿತ್ತು ಅನಿಸುತ್ತದೆ. ನನಗೇನೇನೂ ಇಷ್ಟವಲ್ಲದ ಈ ಪೈಪೋಟಿ ಹಾಸ್ಟೆಲಿನಲ್ಲಿ ನಮ್ಮ ವ್ಯಾಸಂಗಕ್ಕೆ ಸಂಬಂಧಪಟ್ಟಿತ್ತು. ಅದು ಯಾವ ಮಟ್ಟಕ್ಕೆ ಹೋಯಿತೆಂದರೆ ನಾನು ಬೆಳಿಗ್ಗೆ ಹಾಸಿಗೆಯಿಂದ ಮೇಲೇಳಲು ಮಿಸುಕಾಡುತ್ತಿದ್ದಂತೆಯೇ ಬಾಪಟ್ ಚಂಗನೆ ಹಾಸಿಗೆಯಿಂದ ಮೇಲೆದ್ದು ಸ್ನಾನ ಮಾಡಲು ಓಡಿಹೋಗುತ್ತಿದ್ದ! ಹಾಗೆಯೇ ರಾತ್ರಿ ನಾನು ಮಲಗಿದ ನಂತರವೇ ಅವನು ಮಲಗುತ್ತಿದ್ದ. ಅದು ಅವನಿಗೆ ನನಗಿಂತ ಹೆಚ್ಚು ವ್ಯಾಸಂಗ ಮಾಡಿದ ತೃಪ್ತಿ ಕೊಡುತ್ತಿತ್ತೆಂದು ತೋರುತ್ತದೆ. ನನ್ನ ಉಳಿದ ರೂಮ್ ಮೇಟುಗಳು ಬಾಪಟ್ ಮಾಡುತ್ತಿದ್ದ ಈ ವಿಚಿತ್ರ ಪೈಪೋಟಿಯ ಬಗ್ಗೆ ಹಾಸ್ಯ ಮಾಡಿ ನಗುತ್ತಿದ್ದರೂ ಅದು ನಿಲ್ಲಲೇ ಇಲ್ಲ.

ಮಾಸ್ಟರ್ ಹಿರಣ್ಣಯ್ಯನವರ ಲಂಚಾವತಾರ
ಪ್ರಖ್ಯಾತ ನಾಟಕಕಾರ ಮಾಸ್ಟರ್ ಹಿರಣ್ಣಯ್ಯನವರು ಪ್ರತಿ ವರ್ಷವೂ ತಮ್ಮ ಒಂದು ನಾಟಕದ ಪೂರ್ತಿ ಕಲೆಕ್ಷನ್ ನಮ್ಮ ಹಾಸ್ಟೆಲಿಗೆ ದೇಣಿಗೆಯಾಗಿ ಕೊಡುತ್ತಿದ್ದರು. ಆ ವರ್ಷ ಅವರು ಶಿವಮೊಗ್ಗೆಯ ಡಿ ವಿ ಎಸ್ ಹೈಸ್ಕೂಲಿನ ಪಕ್ಕದಲ್ಲೇ ಹಾಕಿದ ರಂಗಮಂಟಪದಲ್ಲಿ ನಡೆಸಿದ ಲಂಚಾವತಾರ ಎಂಬ ನಾಟಕದ ಒಂದು ರಾತ್ರಿಯ ಕಲೆಕ್ಷನ್ ನಮ್ಮ ಹಾಸ್ಟೆಲಿಗೆ ಕೊಟ್ಟರು. ದೊಡ್ಡ ಮೊತ್ತದ ಹಣ ಬಂದುದಕ್ಕೆ ನಮ್ಮ ಹಾಸ್ಟೆಲಿನಲ್ಲಿ ಒಂದು ಔತಣಕೂಟವನ್ನು ಏರ್ಪಡಿಸಲಾಯಿತು. ಆ ಔತಣದ ಊಟ ಎಷ್ಟು ಚೆನ್ನಾಗಿತ್ತೆಂದರೆ ಅದು ಲಂಚಾವತಾರ ನಾಟಕಕ್ಕಿಂತಲೂ ಚೆನ್ನಾಗಿತ್ತೆಂದು ಕೆಲವರ ಅಭಿಪ್ರಾಯವಾಗಿತ್ತು!

ನಮ್ಮ ಹಾಸ್ಟೆಲಿನ ತಾತ್ಕಾಲಿಕ ಸ್ಥಳಾಂತರ
ತುಂಬಾ ಶ್ರೀಮಂತರೊಬ್ಬರು ತಮ್ಮ ಮಗಳ ಮದುವೆ  ಅರ್ಜೆಂಟಾಗಿ ಮಾಡಲು ಹಾಸ್ಟೆಲನ್ನು ನಾಲ್ಕು ದಿನಗಳ ಮಟ್ಟಿಗೆ ಬಾಡಿಗೆಗೆ ಕೇಳಿದರು. ಅವರು ಕೊಡುವುದಾಗಿ ಹೇಳಿದ ಬಾಡಿಗೆ ಎಷ್ಟು ದೊಡ್ಡ ಮೊತ್ತದ್ದಾಗಿತ್ತೆಂದರೆ ನಮ್ಮ ಹಾಸ್ಟೆಲಿನ ಆಡಳಿತ ವರ್ಗ ಡಿ ವಿ ಎಸ್ ಹೈಸ್ಕೂಲಿನ ಒಂದು ಅಂತಸ್ತನ್ನು ನಾಲ್ಕು ದಿನ ಬಾಡಿಗೆಗೆ ತೆಗೆದುಕೊಂಡು ನಮ್ಮನ್ನೆಲ್ಲಾ ಅಡಿಗೆ ಮನೆಯ ವ್ಯವಸ್ಥೆಯೊಡನೆ ಅಲ್ಲಿಗೆ ಸ್ಥಳಾಂತರ ಮಾಡಿ ಬಿಟ್ಟಿತು! ನಮ್ಮ ಹಾಸ್ಟೆಲಿನಿಂದ ಡಿ ವಿ ಎಸ್ ಹೈಸ್ಕೂಲ್ ಸುಮಾರು ಒಂದು ಕಿಲೋಮೀಟರ್ ದೂರವಿತ್ತು. ನಮಗೆಲ್ಲಾ ಆ ಹೊಸದೊಂದು ಅನುಭವ ತುಂಬಾ ಖುಷಿ ಕೊಟ್ಟಿತು. ಹಾಗೆಯೇ ಮದುವೆ ದಿನದ ವಿಶೇಷ ಊಟಕ್ಕೆ ನಾವು ಅತಿಥಿಗಳಾಗಿ ತುಂಬಾ ಆನಂದಿಸಿದೆವು.

ಶ್ರೀಮಂತ ಸ್ನೇಹಿತ ಮತ್ತು ರೋಮ್ಯಾಂಟಿಕ್  ಹಿಂದಿ ಸಿನಿಮಾಗಳು
ನನ್ನ ರೂಮ್ ಮೇಟ್ ಗಳಲ್ಲಿ ಒಬ್ಬನಾದ ಹೊಸನಗರ ತಾಲೂಕ್ ಕೋಡೂರಿನ ಚಂದ್ರಶೇಖರ ಬೇಗನೆ ನನ್ನ  ಆತ್ಮೀಯ ಸ್ನೇಹಿತನಾಗಿ ಬಿಟ್ಟ. ಅವನಿಗೆ ನನ್ನ ಮೆರಿಟ್ ಮೇಲೆ ತುಂಬಾ ಗೌರವ ಇತ್ತು. ಅಷ್ಟು ಮಾತ್ರವಲ್ಲ, ಸ್ವಲ್ಪ ಶ್ರೀಮಂತ ಕುಟುಂಬದವನೇ ಆದ ಚಂದ್ರಶೇಖರನಿಗೆ ನನ್ನನ್ನು ತನ್ನೊಡನೆ ಹೋಟೆಲುಗಳಿಗೆ ಮತ್ತು ಸಿನಿಮಾ ನೋಡಲು ಕರೆದುಕೊಂಡು ಹೋಗುವ ಧಾರಾಳತೆಯೂ ಇತ್ತು. ಅದೊಂದು ರೀತಿಯಲ್ಲಿ ನನಗೆ ದೇವರೇ ಕರುಣಿಸಿದ ವರದಂತಾಯಿತು.

ನನಗೆ ಚಂದ್ರಶೇಖರನೊಡನೆ ಆ ಕಾಲಕ್ಕೆ ತುಂಬಾ ರೋಮ್ಯಾಂಟಿಕ್ ಹಿಂದಿ ಫಿಲಂ ಎಂದು ಪ್ರಸಿದ್ಧವಾದ ರಾಜ್ ಕಪೂರ್ ಅವರ ಸಂಗಮ್ ಸಿನೆಮಾವನ್ನು ನೋಡುವ ಅವಕಾಶ ಒದಗಿ ಬಂತು. ಈ ಸಿನಿಮಾ ಮಲ್ಲಿಕಾರ್ಜುನ ಥಿಯೇಟರಿನಲ್ಲಿ ಆಲ್ ಇಂಡಿಯಾ ರಿಲೀಸ್ ದಿನವೇ ಪ್ರದರ್ಶನ ಮಾಡಲ್ಪಟ್ಟಿತು. ತುಂಬಾ ದೊಡ್ಡ ಕ್ಯೂನಲ್ಲಿ ನಿಂತು ನಾವು ಮೊದಲ ದಿನವೇ ಆ ಸಿನೆಮಾವನ್ನು ನೋಡಿ ಬಿಟ್ಟೆವು. ಶಂಕರ್ ಜೈಕಿಶನ್ ಅವರು ನೀಡಿದ ಮಧುರ ಸಂಗೀತವಿದ್ದ ಈ ಪ್ರಣಯಭರಿತ ಸಿನಿಮಾ ನಮ್ಮನ್ನು ಬೇರೊಂದು ಲೋಕಕ್ಕೇ ಕರೆದೊಯ್ಯಿತು. ಅಲ್ಲಿಯವರೆಗೆ ಕೇವಲ ಕಪ್ಪು ಬಿಳುಪು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ರಾಜ್ ಕಪೂರ್ ಅವರ ಮೊಟ್ಟ  ಮೊದಲ ಈಸ್ಟ್ ಮನ್ ಕಲರ್ ಸಿನಿಮಾವೆ ಸಂಗಮ್ ಆಗಿತ್ತು. ಆ ಸಿನಿಮಾ ನಮಗಾಗಿ ಸೃಷ್ಟಿ ಮಾಡಿದ ಬೇರೊಂದು ಪ್ರಣಯ ಪ್ರಪಂಚದಿಂದ ಹೊರಬರಲು ನಮಗೆ ಹಲವು ದಿನಗಳೇ ಬೇಕಾದವು. ಈ ಸಿನಿಮಾದ ಎಲ್ಲಾ ಹಾಡುಗಳೂ ನಮಗೆ ಇಷ್ಟವಾದರೂ ಅದರ "ಎ ಮೇರಾ ಪ್ರೇಮ ಪತ್ರ್ ಪಡ್ಕರ್" ಎಂಬ ಹಾಡು ನಮ್ಮ ಅತಿ ಮೆಚ್ಚಿನ ಹಾಡಾಗಿ ಬಿಟ್ಟಿತು.  ಓಹ್ ! ಬಾಲ್ಯಕಾಲದ ಆ ಮದುರ ದಿನಗಳು ಎಂದೂ ಪುನಃ ಬರಲಾರವು!

ಗೀತ್ ಗಾಯಾ ಪತ್ತರೋನೇ
ಚಂದ್ರಶೇಖರನೊಡನೆ ನಾನು ನೋಡಿದ ಇನ್ನೊಂದು ಸಿನಿಮಾ "ಗೀತ್ ಗಾಯಾ ಪತ್ತರೋನೇ"  ಕೂಡ ವಿ ಶಾಂತಾರಾಮ್ ಅವರು ನಿರ್ಮಾಣಮಾಡಿ ನಿರ್ದೇಶಿಸಿದ ಒಂದು ರೋಮ್ಯಾಂಟಿಕ್ ಹಿಂದಿ ಫಿಲಂ ಆಗಿತ್ತು. ವಿನಾಯಕ ಟಾಕೀಸ್ ನ್ನಲ್ಲಿ ನಾವು ನೋಡಿದ ಈ ಸಿನಿಮಾದಲ್ಲಿ ಆಗಿನ್ನೂ ಹೊಸ ನಟನಾದ ಜಿತೇಂದ್ರ ಮತ್ತು ಶಾಂತಾರಾಮ್ ಅವರ ಪುತ್ರಿ ರಾಜಶ್ರೀ ನಟಿಸಿದ್ದರು. ನಮಗೆ ತುಂಬಾ ಇಷ್ಟವಾದ ಈ ಸಿನಿಮಾ ಜಿತೇಂದ್ರನಿಗೆ ಒಳ್ಳೆ ಹೆಸರು ತಂದಿತು. ಹಾಡುಗಳೂ ಕೂಡ (ಮುಖ್ಯವಾಗಿ ಟೈಟಲ್ ಸಾಂಗ್) ನಮಗೆ ತುಂಬಾ ಇಷ್ಟವಾಗಿ ನಾವು ಅವನ್ನು ಮನಸಿನಲ್ಲೇ ಗುನುಗುತ್ತಿದ್ದುದು ನೆನಪಾಗುತ್ತದೆ.

ಹಾರ್ಡ್ವಿಕ್ ಹೈಸ್ಕೂಲಿನ ಕ್ರಿಕೆಟ್ ಟೀಮ್ 
ನಮಗೆ ಆ ವರ್ಷ ತುಂಬಾ ಕ್ರೀಡಾ ಚಟುವಟಿಕೆಗಳನ್ನು ನೋಡುವ ಅವಕಾಶ ಸಿಕ್ಕಿತು. ಮೈಸೂರಿನ ಹಾರ್ಡ್ವಿಕ್ ಹೈಸ್ಕೂಲಿನ ಕ್ರಿಕೆಟ್ ಟೀಮ್ ಒಂದು ಶಿವಮೊಗ್ಗೆಗೆ ಬಂದು ನಮ್ಮ ಶಾಲಾ ಟೀಮಿನೊಡನೆ ನಮ್ಮ ಶಾಲೆಯ ಹತ್ತಿರವೇ ಇದ್ದ ದುರ್ಗಿಗುಡಿ ಮೈದಾನದಲ್ಲಿ ಒಂದು ಪಂದ್ಯ ಆಡಿತು. ಪಂದ್ಯವನ್ನು ನೋಡಲು ನಮಗೆ ಒಂದು ದಿನದ ರಜೆ ಕೊಟ್ಟಿದ್ದರಿಂದ ನಾವು ಪೂರ್ತಿ ಮ್ಯಾಚ್ ನೋಡಿ ಬಿಟ್ಟೆವು. ನಮ್ಮ ಶಾಲೆಯ ಟೀಮ್ ತುಂಬಾ ಚೆನ್ನಾಗಿ ಆಡಿ ಗೆದ್ದು ಬಿಟ್ಟಾಗ ನಮಗಾದ ಸಂತೋಷ  ಅಷ್ಟಿಟ್ಟಲ್ಲ. ಅದು ನಾನು ನೋಡಿದ ಮೊದಲ ಕ್ರಿಕೆಟ್ ಮ್ಯಾಚ್ ಆಗಿತ್ತು. ಆಮೇಲೆ ನಾನು ದುರ್ಗಿಗುಡಿ ಟೀಮ್ ಎಂದು ಮುಂದೆ ತುಂಬಾ ಹೆಸರು ಗಳಿಸಿದ ಶಿವಮೊಗ್ಗೆಯ ಟೀಮ್ ಆಡಿದ ತುಂಬಾ ಪಂದ್ಯಗಳನ್ನು ನೋಡಿದೆ. ಪುಟ್ಟಪ್ಪ ಎಂಬುವರು ಕ್ಯಾಪ್ಟನ್ ಆಗಿದ್ದ ಈ ಟೀಮಿನಲ್ಲಿ ನಾರಾಯಣ (ನಾಣಿ), ಶ್ರೀನಿವಾಸ ಶೆಣೈ ಮತ್ತು ಯಜ್ಞನಾರಾಯಣ  (ಯಜ್ಞ) ಎಂಬುವ ಒಳ್ಳೆಯ ಆಟಗಾರರಿದ್ದರು. ಅದರಲ್ಲೂ ವಿಕೆಟ್ ಕೀಪರ್ ಆಗಿದ್ದ  ಯಜ್ಞ ವಿಕೆಟ್ ಹಿಂದೆ ತುಂಬಾ ಗಿಮ್ಮಿಕ್ ಮಾಡುತ್ತಾ ನಮಗೆಲ್ಲಾ ತುಂಬಾ ನಗೆ ಬರಿಸುವ ಇಷ್ಟದ ಆಟಗಾರನಾಗಿದ್ದ. ಈ ಯಜ್ಞ ಪ್ರಸಿದ್ಧ ಅಡಿಕೆ ಮಂಡಿಯಾಗಿದ್ದ ಸರಾಫ್ ಮಂಜಪ್ಪ ಅಂಡ್ ಸನ್ಸ್ ಕುಟುಂಬಕ್ಕೆ ಸೇರಿದವನಾಗಿದ್ದ.
------- ಮುಂದುವರಿಯುವುದು-----

Friday, April 3, 2020

ಬಾಲ್ಯ ಕಾಲದ ನೆನಪುಗಳು – ೭೫


ನಮ್ಮ ನೆಚ್ಚಿನ ಪ್ರಧಾನಿ ನೆಹರು ಅವರು ತೀರಿಕೊಂಡ ಸಮಾಚಾರ ನನ್ನ ಮನಸ್ಸಿಗೆ ತುಂಬಾ ಆಘಾತವನ್ನೇ ತಂದು ಬಿಟ್ಟಿತು. ನಮ್ಮ ಬಾಲ್ಯದಿಂದಲೂ ನಾವು ಅವರ ಬಗ್ಗೆ ಎಷ್ಟೋ ಕಥೆಗಳನ್ನು ಓದಿದುದಲ್ಲದೇ ಅವರ ಬಗ್ಗೆ ಅಪಾರ ಮೆಚ್ಚುಗೆ ಮತ್ತು ಗೌರವ ಹೊಂದಿದ್ದೆವು. ದಿನಗಳಲ್ಲಿ ಪ್ರತಿಯೊಂದು ಮನೆಯಲ್ಲೂ ನೆಹರು ಅವರ ಒಂದು ಫೋಟೋ ಇದ್ದೇ ಇರುತ್ತಿತ್ತು. ಚೀನಾ ದೇಶದಿಂದಾದ ಅನಿರೀಕ್ಷಿತ ಆಕ್ರಮಣದಿಂದ ತುಂಬಾ ಝರ್ಜರಿತರಾಗಿದ್ದ ನೆಹರು ಅವರ ಅರೋಗ್ಯ ತುಂಬಾ ಕೆಟ್ಟು ಹೋಗಿತ್ತೆಂದು ನಮಗೆಲ್ಲಾ ಗೊತ್ತಿತ್ತು. ಆದರೆ ಹೀಗೆ ಅವರ ಸಾವು ಅನಿರೀಕ್ಷಿತವಾಗಿ ಆಗಿ ಬಿಡುವುದೆಂದು ನಾವು ಯಾರೂ ಯೋಚಿಸಿರಲಿಲ್ಲ.

ನಾವು ಹೋಗಬೇಕಾದ ಗುಡ್ಡೇತೋಟ ಜಯಪುರದ ಮುಂದೆ ಕಳಸ ಮತ್ತು ಹೊರನಾಡಿಗೆ ಹೋಗುವ ದಾರಿಯಲ್ಲಿದ್ದ ಒಂದು ಹಳ್ಳಿಯಾಗಿತ್ತು. ಮಾರ್ಗದ ರಸ್ತೆ ತುಂಬಾ ಅಂಕು ಡೊಂಕಾಗಿ ಹೆಚ್ಚು ಅಗಲ ಇರದಿದ್ದರಿಂದ ಕೇವಲ ಶಂಕರ್ ಮೋಟಾರ್ ಅವರ ಒಂದು ಮಿನಿ ಬಸ್ ಮಾತ್ರಾ ಕೊಪ್ಪದಿಂದ ಕಳಸಕ್ಕೆ ಓಡಾಡುತ್ತಿತ್ತು. ಬಸ್ಸಿನ ಡ್ರೈವರ್ ತಿಮ್ಮಪ್ಪ ಮಾರ್ಗದಲ್ಲಿ ಪ್ರಯಾಣ ಮಾಡುವ ಜನಗಳಿಗೆ ತುಂಬಾ ಆತ್ಮೀಯನಾಗಿ ಬಿಟ್ಟಿದ್ದ.

ಗುಡ್ಡೇತೋಟ ಪ್ರಕೃತಿ ಸೌಂದರ್ಯ ತುಂಬಿದ ಮಲೆನಾಡಿನ ಒಂದು ಹಳ್ಳಿಯಾಗಿತ್ತು. ನಾವು ಮೊಟ್ಟ ಮೊದಲು ಸುಬ್ಬರಾವ್ ಎಂಬ ಪ್ರಮುಖ ವ್ಯಕ್ತಿಯೊಬ್ಬರ ಮನೆಗೆ  ಹೋದೆವು. ಸುಬ್ಬರಾಯರು ಕಾಂಗ್ರೆಸ್ ಪಾರ್ಟಿಯ ಮುಖಂಡರಾಗಿದ್ದು ಕೊಪ್ಪ ತಾಲುಕ್ ಬೋರ್ಡಿನ ವೈಸ್ ಪ್ರೆಸಿಡೆಂಟ್ ಕೂಡ ಆಗಿದ್ದರು. ಅವರು ನಮ್ಮ ಸಮಾಜದ ಪ್ರಪ್ರಥಮ ರಾಜಕೀಯ ನೇತಾರರಾಗಿದ್ದರು. ಸದಾ ಅಚ್ಚ ಬಿಳಿಯ ಖಾದಿ ವಸ್ತ್ರಧಾರಿಯಾಗಿರುತ್ತಿದ್ದ ಸುಬ್ಬರಾಯರು ಅತ್ಯಂತ ಧೀಮಂತ ವ್ಯಕ್ತಿತ್ವ ಹೊಂದಿದ್ದು ಅವರ ಕಂಠ ಧ್ವನಿಯೂ ಅಷ್ಟೇ ಪ್ರಭಾವಶಾಲಿಯಾಗಿತ್ತು. ನಾವು ರಾತ್ರಿಯ ಊಟವನ್ನು ಅವರ ಮನೆಯಲ್ಲೇ ಮುಗಿಸಿ ಅಲ್ಲಿಯೇ ತಂಗಿದೆವು. ತುಂಬಾ ರಾತ್ರಿಯವರೆಗೆ ರೇಡಿಯೋದಲ್ಲಿ ನೆಹರು ಅವರ ಬಗ್ಗೆ ನಮ್ಮ ರಾಜ್ಯದ ಅನೇಕ ರಾಜಕೀಯ ನೇತಾರರ ಸಂತಾಪ ಸೂಚಕ ಭಾಷಣಗಳು ಬರುತ್ತಲೇ ಇದ್ದವು. ನಾವು ಅವನ್ನು ಕೇಳುತ್ತಲೇ ನಿದ್ದೆ ಮಾಡಿದೆವು.

ಸುಬ್ಬರಾಯರಿಗೆ ನಾವು ಅವರ ಮನೆಗೆ ಹೋದ ಕಾರಣ ಯಾವ ಪೀಠಿಕೆಯಿಲ್ಲದೆಯೇ ಅರಿವಾಗಿತ್ತು. ಬೆಳಗಿನ ತಿಂಡಿಯ ನಂತರ ನಮ್ಮ ತಂದೆಯವರು ಅವರಿಗೆ ನನ್ನ ವಿದ್ಯಾಭ್ಯಾಸಕ್ಕೆ ಬೇಕಾದ ಹಣದ ಅವಶ್ಯಕತೆಯನ್ನು ಸಂಕ್ಷಿಪ್ತವಾಗಿ ಹೇಳಿದರು. ಸುಬ್ಬರಾಯರ ಮುಖದಲ್ಲಿ ಅದಕ್ಕೆ ಯಾವ ಪ್ರತಿಕ್ರಿಯೆಯೂ ಕಾಣಲಿಲ್ಲ. ಸುಮ್ಮನೇ ಮನೆಯೊಳಗೆ ಹೋಗಿ ಬಂದ ಅವರು ನನ್ನ ಕೈಮೇಲೆ ಒಂದು ರೂಪಾಯಿನ ಆರು ನೋಟುಗಳನ್ನು ಇಟ್ಟು ಬಿಟ್ಟರು. ಅದು ನನ್ನ ವಿದ್ಯಾಭ್ಯಾಸಕ್ಕೆ ನಮ್ಮ ಸಮಾಜದ ಮೊಟ್ಟ ಮೊದಲ ಕೊಡುಗೆಯಾಗಿತ್ತು.

ಸುಬ್ಬರಾಯರಿಂದ ನಾವೇನು ಹೆಚ್ಚು ಹಣದ ಕೊಡುಗೆಯನ್ನು ನಿರೀಕ್ಷಿಸಿರಲಿಲ್ಲ. ನಮ್ಮ ದೃಷ್ಟಿಯಲ್ಲಿ ಅವರು ಕೃಷ್ಣರಾಯರಷ್ಟು ಶ್ರೀಮಂತರಾಗಿರಲಿಲ್ಲ. ಆದರೆ ಕೃಷ್ಣರಾಯರು ದೊಡ್ಡ ಮಟ್ಟದ ಶ್ರೀಮಂತರು ಮಾತ್ರವಲ್ಲ ಅವರೇ ನನ್ನ ಹತ್ತಿರ ನನ್ನ ವಿದ್ಯಾಭ್ಯಾಸಕ್ಕಾಗಿ ಕೊಡುಗೆ ನೀಡುವ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದರು. ಆದ್ದರಿಂದ ಅವರಿಂದ ದೊಡ್ಡ ಮಟ್ಟದ ಕೊಡುಗೆಯನ್ನು ನಿರೀಕ್ಷಿಸುತ್ತಾ ನಾವು ದಿನ ಬೆಳಿಗ್ಗೆ ಅವರ ದೊಡ್ಡ ಬಂಗಲೆಯೊಳಗೆ ಪ್ರವೇಶ ಮಾಡಿದೆವು.

ನಮ್ಮ ದುರಾದೃಷ್ಟವೋ ಏನೋ ಕೃಷ್ಣರಾಯರ ಹಿರಿಯ ಮಗ ಚಂದ್ರಶೇಖರಯ್ಯನವರಿಂದ ನಮಗೆ ಅವರು ಊರಿನಲ್ಲಿಲ್ಲವೆಂದು ತಿಳಿದು ಬಂತು. ನಮ್ಮ ತಂದೆಯವರು ಚಂದ್ರಶೇಖರಯ್ಯನವರಿಗೆ ನಾವು ಅವರ ಮನೆಗೆ ಬಂದ ಕಾರಣವನ್ನೂ ಮತ್ತು ಅವರ ತಂದೆಯವರು ನನಗೆ ಹಿಂದೆ ಸಹಾಯವನ್ನು ಮಾಡುವ ಭರವಸೆ ನೀಡಿದ್ದನ್ನೂ ತಿಳಿಸಿದರು. ಚಂದ್ರಶೇಖರಯ್ಯನವರು ಆಗ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದರು. ಆದ್ದರಿಂದ ತಂದೆಯವರು ಮನೆಯಲ್ಲಿ ಇಲ್ಲದಿದ್ದರೂ ಅವರಿಂದ ನಾವು ಸ್ವಲ್ಪ ಹೆಚ್ಚು ಕೊಡುಗೆಯನ್ನು ನಿರೀಕ್ಷಿಸಿದ್ದೆವು. ಆದರೆ ಅವರು ಹಣದ ಕೊಡುಗೆಯ ವಿಚಾರ ಕೇವಲ ಅವರ ತಂದೆಗೆ ಸಂಬಂಧಿಸಿದ್ದೆಂದೂ ತಾವೇನೂ ಮಾಡಲಾಗುವುದಿಲ್ಲವೆಂದೂ ಹೇಳಿಬಿಟ್ಟರು. ಹಾಗೆಯೇ ತಂದೆಯವರು ಇನ್ನೊಮ್ಮೆ ಶಿವಮೊಗ್ಗೆಗೆ ಬಂದಾಗ ಅವರೊಡನೆ ನಾನು ವಿಷಯ ಮಾತನಾಡಬಹುದೆಂದೂ ಹೇಳಿದರು. ನಾವು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಅಲ್ಲಿಂದ ಹೊರಡಬೇಕಾಯಿತು.

ನಾವು ಗುಡ್ಡೇತೋಟದಲ್ಲಿ ಇನ್ನೂ ಎರಡು ಮನೆಗಳಿಗೆ ಹೋದೆವು. ಒಂದು ಮನೆಯಲ್ಲಿದ್ದ ಶಿವಶಂಕರಯ್ಯನವರು ನಮಗೆ ಎರಡು ರೂಪಾಯಿ ಕೊಡುಗೆ ನೀಡಿದರು. ನನಗೆ ಅವರ ಪರಿಚಯವಿತ್ತು. ಏಕೆಂದರೆ ಅವರ ಮನೆಯ ನಾಗರತ್ನ ಎಂಬಾಕೆಯನ್ನು ಹೊಕ್ಕಳಿಕೆಯ ಫಣಿಯಪ್ಪಯ್ಯನವರ ಮಗ ಶೇಷಾದ್ರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಆದ್ದರಿಂದ ಅವರು ಆಗಾಗ ಹೊಕ್ಕಳಿಕೆಗೆ ಬರುತ್ತಿದ್ದರು. ಇನ್ನೊಂದು ಮನೆಯಲ್ಲಿದ್ದ ತರುಣನೊಬ್ಬ ನಮ್ಮನ್ನು ತುಂಬಾ ಆದರಿಸಿ ಮಾತನಾಡಿಸಿದ. ಅವನ ಪ್ರಕಾರ ನನ್ನಂತಹ ಬಡ ಮೆರಿಟ್ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಪ್ರತಿಯೊಬ್ಬ ಜಮೀನ್ದಾರರ ಪರಮ ಕರ್ತವ್ಯವಾಗಿತ್ತು! ಆದರೆ ಅವರಿಂದ ಹಣವನ್ನು ಪಡೆಯುವುದೇನು ಸುಲಭದ ವಿಷಯವಾಗಿರಲಿಲ್ಲ! ಬಗ್ಗೆ ಅವನು ಕೆಲವು ಸಲಹೆಗಳನ್ನೂ ನೀಡಿದ! ಆದರೆ ಅವನ ಕೈಯಲ್ಲಿ ಆಗ ಹಣವಿರದ್ದರಿಂದ ಸ್ವತಃ ಏನೂ ಕೊಡುಗೆ ನೀಡಲು ಅವನಿಗೆ ಸಾಧ್ಯವಿರಲಿಲ್ಲ! ಆದರೆ ನಾವು ನಿರಾಶರಾಗ ಬೇಕಾಗಿರಲಿಲ್ಲ! ಏಕೆಂದರೆ ಅವನು ನಮ್ಮ ವಿಳಾಸವನ್ನು ಒಂದು ಪುಸ್ತಕದಲ್ಲಿ ಬರೆದುಕೊಂಡು ಬಿಟ್ಟ. ಅವನ ಕೊಡುಗೆ ಸ್ವಲ್ಪ ದಿನದಲ್ಲೇ ಮನಿ ಆರ್ಡರ್ ಮೂಲಕ ನಮ್ಮ ಕೈ ಸೇರಲಿತ್ತು! ಅವನು ಹೇಳಿದ ಮನಿ ಆರ್ಡರ್ ಎಂದೂ ನಮಗೆ ತಲುಪಲಿಲ್ಲವೆಂದು ನಾನು ಹೇಳಬೇಕಾಗಿಲ್ಲ! ಏಕೆಂದರೆ ನಮಗೆ ಬೇರೆಯವರಿಂದ ಅವನೊಬ್ಬ ಲಾಟ್ ಪುಟ್  ಅಥವಾ ಬ್ಲಫ್ ಮಾಸ್ಟರ್ ಎಂದು ತಿಳಿದು ಬಂತು. ಸ್ವಲ್ಪ ವರ್ಷದ ನಂತರ ಅವನಿಗೆ ನಮ್ಮೂರಿನ ಹುಡುಗಿಯೊಬ್ಬಳೊಡನೆ ವಿವಾಹವಾಯಿತು.

ಒಟ್ಟಿನಲ್ಲಿ ನಮಗೆ ಗುಡ್ಡೇತೋಟ ಊರಿನಿಂದ ರೂಪಾಯಿ ಕೊಡುಗೆ ಸಿಕ್ಕಿತ್ತು. ನಾವು ಬಸ್ ಚಾರ್ಜ್ ಎಷ್ಟು ಕೊಟ್ಟಿದ್ದೆವೆಂದು ನನಗೀಗ ನೆನಪಿಗೆ ಬರುತ್ತಿಲ್ಲ. ಆದರೆ ನಾವು ವಾಪಾಸ್ ಬರುವಾಗ ಬಸ್ ಚಾರ್ಜ್ ಕೊಡಬೇಕಾಗಲಿಲ್ಲ. ಏಕೆಂದರೆ ಅದೇ ಬಸ್ಸಿನಲ್ಲಿ ಪ್ರಯಾಣ ಮಾಡಿದ ಚಂದ್ರಶೇಖರಯ್ಯನವರು ನಮ್ಮ ಟಿಕೆಟ್ ಮಾಡಿಸಿ ಬಿಟ್ಟರು. ನಾವು ಅಲ್ಲಿಂದ ಅಗಳಗಂಡಿ ಊರಿನ ಮೇಲಿನ ತೋಟ ಎಂಬಲ್ಲಿ ನಡೆಯಲಿರುವ ಜೋಡಿ ಮದುವೆಗೆ ಹೋದೆವು. ಅಕ್ಕ ತಂಗಿಯರಿಬ್ಬರಿಗೆ ಒಂದೇ ಬಾರಿ ಮದುವೆ ನೆರವೇರಿಸಲಾಯಿತು. ಮದುವೆಯ ಒಬ್ಬ ವರ ಒಂದು ಕಾಲದಲ್ಲಿ ನಮ್ಮೂರಿನ ಮೇಲಿನಕೊಡಿಗೆಯಲ್ಲಿದ್ದ ಸೀತಾರಾಮಯ್ಯನವರ ಮಗ ತಿಮ್ಮಪ್ಪ. ಮದುವೆಯ ದಿನ ರಾತ್ರಿ ನಾವು ಬೆಳವಿನಕೊಡಿಗೆ ಶ್ರೀನಿವಾಸಯ್ಯನವರೊಡನೆ ಅವರ (ದಿವಂಗತ) ಮಾವನ ಮನೆಯಾದ ಶ್ರೀಮಂತ ಜಮೀನ್ದಾರ ಅಗಳಗಂಡಿ ಹೆಬ್ಬಾರ್ ಮನೆಗೆ ಹೋಗಿ ಅಲ್ಲಿಯೇ ತಂಗಿದೆವು. ಶ್ರೀನಿವಾಸಯ್ಯನವರ ಮೂಲಕ ನಾವು ಹೆಬ್ಬಾರರ ಶ್ರೀಮತಿಯವರಿಂದ ಸ್ವಲ್ಪ ಕೊಡುಗೆಯನ್ನು ನಿರೀಕ್ಷಿಸಿದ್ದೆವು. ಆದರೆ ನಮ್ಮ ನಿರೀಕ್ಷೆ ಸುಳ್ಳಾಗಿ ನಮಗೆ ಬೆಳಗಿನ ಉಪಹಾರ ಮಾತ್ರ ಕೊಡುಗೆಯಾಗಿ ಸಿಕ್ಕಿತು. ಅಷ್ಟೇ. ನಾವಲ್ಲಿಂದ ಊರಿಗೆ ಹಿಂದಿರುಗಿದೆವು.

ನನಗೆ ಅಲ್ಲಿಂದ ಮುಂದೆ ಯಾರ ಮನೆಗೂ ಹೋಗಿ ಕೊಡುಗೆ ಕೇಳುವ ಇಚ್ಚೆಯಿರಲಿಲ್ಲ. ಆದರೆ ನಮ್ಮ ತಂದೆಯವರ ಕೈಯಲ್ಲಿದ್ದ ಹಣ ಪಡೆದು ನಾನು ಶಿವಮೊಗ್ಗೆಗೆ ಹೊರಡುವ ಸಾಧ್ಯತೆಗಳೇ ಇರಲಿಲ್ಲ. ಆದ್ದರಿಂದ ನಿರ್ವಾಹವಿಲ್ಲದೇ ನಾವು ಸೆಕೆಂಡ್ ರೌಂಡ್ ಕಲೆಕ್ಷನ್ ಮಾಡಲು ಹೊರಡಲೇ ಬೇಕಾಯಿತು. ಬಾರಿ ನಾವು ಮೊಟ್ಟ ಮೊದಲ ಮನೆಯಲ್ಲೇ ನಿರಾಶರಾಗಬಾರದೆಂದು ಸೀದಾ ಕರಿಗೆರಸಿ ಗಣೇಶ ಭಾವನ  ಮನೆಗೆ ಹೋದೆವು. ಅವರು ನನ್ನ ಕೈಯಲ್ಲಿ ೧೦ ರೂಪಾಯಿ ಇಟ್ಟು ನಮಗೆ ಅಲ್ಲಿಂದ ಅವರ ಭಾವನಾದ ಗುಡ್ಡೇಕೊಪ್ಪ ಮಂಜುನಾಥಯ್ಯನವರ ಮನೆಗೆ ಹೋಗುವಂತೆ ಹೇಳಿದರು.

ಗುಡ್ಡೇಕೊಪ್ಪ ಶಿವಮೊಗ್ಗ ಮತ್ತು ಚಿಕ್ಕಮಗಳೂರ್ ಜಿಲ್ಲೆಗಳ ಗಡಿಯಲ್ಲಿದ್ದ ಒಂದು ಸುಂದರ ಮಲೆನಾಡ ಹಳ್ಳಿಯಾಗಿತ್ತು. ಮಂಜುನಾಥಯ್ಯನವರಿಗೆ ತಲವಾನೆ ತಿಮ್ಮಪ್ಪಯ್ಯನವರ ಮಗಳನ್ನು ಕೊಟ್ಟು ವಿವಾಹವಾಗಿತ್ತು. ಅವರ ಮೂಲ ಮನೆ ಸ್ವಲ್ಪ ಕಾಲದ ಹಿಂದೆ ಬೆಂಕಿ ಅನಾಹುತಕ್ಕೆ ಸಿಕ್ಕಿ ಸುಟ್ಟು ಹೋಗಿ ತತ್ಕಾಲಕ್ಕೆ ಅವರೊಂದು ಶೆಡ್ ಎನ್ನಬಹುದಾದ ಕಟ್ಟಡದಲ್ಲಿ ವಾಸ ಮಾಡುತ್ತಿದ್ದರು. ಆಗಿನ್ನೂ ತರುಣರಾಗಿದ್ದ ಮಂಜುನಾಥಯ್ಯನವರು ಆಗ ತಮ್ಮ ಆರ್ಥಿಕ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲದಿದ್ದರೂ ತುಂಬಾ ದೂರದೃಷ್ಟಿಯಿಂದ ಒಂದು ಫ್ಯೂಚರ್ ಪ್ಲಾನ್ ತಯಾರು ಮಾಡಿದ್ದರು. ನನಗೆ ಅವರು ತಮ್ಮ ವಿಶಾಲವಾದ ಬತ್ತದ ಗದ್ದೆಗಳಲ್ಲಿ ನೆಡಿಸಿದ್ದ ಅಡಿಕೆ ಸಸಿಗಳು ಬೆಳೆದು ಮೇಲೆ ಬರುತ್ತಿರುವುದನ್ನು ತೋರಿಸಿ ಅವುಗಳಲ್ಲಿ ಬೆಳೆ ಬರಲು ಪ್ರಾರಂಭವಾಗುವಾಗ ತಾವೂ ಒಬ್ಬ ಶ್ರೀಮಂತರಾಗುವ ಕನಸು ನನಸಾಗುವುದೆಂದು ನಿರೀಕ್ಷಿಸುವುದಾಗಿ ಹೇಳಿದರು. ಮುಂದೆ ಅವರ ಕನಸು ಹೇಗೆ ನನಸಾಯಿತೆಂದು ನಾನಿಲ್ಲಿ ಬರೆಯ ಬೇಕಾಗಿಲ್ಲ. ಮುಂದೆ ಅವರು ಕೋಟ್ಯಾಧಿಪತಿಯಾಗಿದ್ದು ಹೆಚ್ಚು ಜನರಿಗೆ ಗೊತ್ತಿರುವ ವಿಷಯ. ಮಂಜುನಾಥಯ್ಯನವರು ನನಗೆ ೧೦ ರೂಪಾಯಿ ಕೊಟ್ಟುದುದಲ್ಲದೇ ನನ್ನನ್ನು ಹುಲ್ಕುಳಿ ಸುಬ್ಬರಾಯರೆಂಬ ಶ್ರೀಮಂತರ ಮನೆಗೆ ಕರೆದುಕೊಂಡು ಹೋಗಿ ಅವರಿಂದಲೂ ೧೦ ರೂಪಾಯಿ ಕೊಡಿಸಿದರು. ಒಟ್ಟಿನಲ್ಲಿ ನಮ್ಮ ಸೆಕೆಂಡ್ ರೌಂಡಿನಲ್ಲಿ ೩೦ ರೂಪಾಯಿ ಕಲೆಕ್ಷನ್ ಮಾಡಿ ನಾವು ಊರಿಗೆ ಹಿಂತಿರುಗಿದೆವು.

ಅಷ್ಟರಲ್ಲಿ ನಮಗೆ ನಮ್ಮೂರಿಗೇ  ದೊಡ್ಡ ಸಾಹುಕಾರರಾಗಿದ್ದ ಬೆಳವಿನಕೊಡಿಗೆ ತಿಮ್ಮಪ್ಪಯ್ಯನವರು ನಾವು ಬೇರೆ ಊರುಗಳಿಗೆ ಕಲೆಕ್ಷನ್ ಮಾಡಲು ಹೋಗಿದ್ದರೂ ಊರಿನವರೇ ಆದ ಅವರ ಹತ್ತಿರ ಕೊಡುಗೆಗೆ ಬಂದಿಲ್ಲವೆಂದು ಹೇಳುತ್ತಿದ್ದರೆಂದು ತಿಳಿಯಿತು. ಅದನ್ನು ಪರೀಕ್ಷಿಸಿಯೇ ಬಿಡಬೇಕೆಂದು ನಮ್ಮ ತಂದೆಯವರು ನನ್ನನ್ನು ಕರೆದುಕೊಂಡು ಬೆಳವಿನಕೊಡಿಗೆ ಮನೆಗೆ ಹೋಗಿ ತಾವು ಬಂದ ಉದ್ದೇಶವನ್ನು ತಿಳಿಸಿದರು. ಆದರೆ ತತ್ ಕ್ಷಣ ಅವರ ಬಾಯಿಯಿಂದ ಯಾವುದೇ ಮಾತು ಹೊರಬರಲಿಲ್ಲ. ಆದರೆ ಅವರ ಮುಖದಲ್ಲಿ ನಮಗೆ ಸ್ವಲ್ಪ ಹಣವನ್ನೂ ಕೊಡದೇ ನಮ್ಮನ್ನು ಹೇಗೆ ಸಾಗಹಾಕಬೇಕೆಂಬ ಚಿಂತೆ ನಡೆಯುತ್ತಿರುವುದು  ವ್ಯಕ್ತವಾಯಿತು. ಕಟ್ಟ  ಕಡೆಗೆ ಅವರ ಬಾಯಿಯಿಂದ ಒಂದು ಮಾತು ಹೊರ ಬಂತು. ಅದೇನೆಂದರೆ "ನಾನು ಬಗ್ಗೆ ಯೋಚಿಸಿ ಮುಂದೆ ತೀರ್ಮಾನಿಸುವೆ " ಎಂದು. ಆಮೇಲೆ ನಾವು ಬರಿಗೈನಲ್ಲಿ ಹಿಂತಿರುಗಿ ಮನೆ ಸೇರಿದೆವು.

ಗುಡ್ಡೇತೋಟದ ಕೃಷ್ಣರಾಯರ ಕಥೆಯೂ ಹೀಗೆಯೇ ಮುಕ್ತಾಯವಾಯಿತು. ಮುಂದೆ ನಾನು ಶಿವಮೊಗ್ಗೆಯಲ್ಲಿ ಅವರನ್ನು ಭೇಟಿಯಾದಾಗ ಅವರೇ ನನ್ನ ಹತ್ತಿರ ಒಟ್ಟು ಎಷ್ಟು ಕಲೆಕ್ಷನ್ ಆಯಿತೆಂದು ಕೇಳಿದರು. ನಾನು ಅವರ ಊರಿನಲ್ಲಿ ಕೇವಲ ರೂಪಾಯಿ ಕೊಡುಗೆ ದೊರೆಯಿತೆಂದು ಹೇಳಿದಾಗ ಆಶ್ಚರ್ಯ ವ್ಯಕ್ತ ಪಡಿಸಿದರು. ಆದರೆ ನಾನು ಅವರ ಮಗ ಚಂದ್ರಶೇಖರಯ್ಯನವರು ತಮ್ಮ ತಂದೆಯವರೇ ಶಿವಮೊಗ್ಗೆಗೆ ಬಂದಾಗ ಕೊಡುಗೆ ನೀಡುವುದಾಗಿ ಹೇಳಿದ್ದರೆಂದು ತಿಳಿಸಿದಾಗ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಒಟ್ಟಿನಲ್ಲಿ ಅವರ ಕೊಡುಗೆಯ ವಿಷಯ ಅಲ್ಲಿಗೆ ಮುಕ್ತಾಯ ಕಂಡಿತು.

ನಾನು ತುಂಬಾ ವಿವರವಾಗಿ ಅಧ್ಯಾಯವನ್ನು ಬರೆಯಲು ಕಾರಣ ಆಗಿನ ಕಾಲದ ಶ್ರೀಮಂತ ಜಮೀನ್ದಾರರುಗಳು ಹಣದ ಕೊಡುಗೆಯ ವಿಷಯದಲ್ಲಿ ಎಷ್ಟು ಬಿಗಿ ಮುಷ್ಟಿಯವರಾಗಿದ್ದರೆಂದು ತಿಳಿಸಲು ಮಾತ್ರಾ. ಇದೇ ಶ್ರೀಮಂತರ ಮುಂದಿನ ಪೀಳಿಗೆಯ ವ್ಯಕ್ತಿಗಳು ಬಗೆಯ ನಡೆವಳಿಕೆಗಳಿಗೆ ಅಪವಾದವಾಗಿ ಬಿಟ್ಟರೆಂಬುವುದೂ ಅಷ್ಟೇ ಸತ್ಯ. ಆದರೆ ಈಗ ಕಾಲ  ಬದಲಾಗಿದೆ. ಅಂದು ನಾವು ಕಲೆಕ್ಷನ್ ಡ್ರೈವ್ ಮಾಡಿದಂತೆ ವಿದ್ಯಾಭ್ಯಾಸಕ್ಕಾಗಿ ಹಣದ ಕೊಡುಗೆ ಕೇಳುವ ಪರಿಸ್ಥಿತಿ ಇಂದಿನ ಮಲೆನಾಡಿನಲ್ಲಿ ಇಲ್ಲ. ಆದರೆ ಆಗಿನ ಕಾಲದಲ್ಲೂ ಕೆಲವರು ಕೊಡುಗೈ ದಾನಿಗಳು ಇದ್ದರು. ಅದಕ್ಕೆ ಉದಾಹರಣೆ ನಮ್ಮ ಪುರದಮನೆ ಶ್ರೀನಿವಾಸಯ್ಯನವರೇ ಆಗಿದ್ದರು. ನಮ್ಮ ಒಟ್ಟು ಕಲೆಕ್ಷನ್ ೩೮ ರೂಪಾಯಿ ಆಗಿತ್ತು. ಆದರೆ ಹಿಂದಿನ ವರ್ಷ ಶ್ರೀನಿವಾಸಯ್ಯನವರು ನಮ್ಮ ಕೋರಿಕೆ ಇಲ್ಲದೇ ನನ್ನ ಕೈಮೇಲೆ ೫೦ ರೂಪಾಯಿ ಇಟ್ಟು ಬಿಟ್ಟಿದ್ದರು! ಆದರೆ ವರ್ಷ ಪುನಃ ಅವರ ಹತ್ತಿರ ಹೋಗುವುದು ನಮಗೆ ಇಷ್ಟವಿರಲಿಲ್ಲ.

ನನ್ನ ಅದೃಷ್ಟದಿಂದ ನನಗೆ ಅಲ್ಲಿಂದ ಮುಂದೆ ನನ್ನ ವಿದ್ಯಾಭ್ಯಾಸಕ್ಕಾಗಿ ಯಾರಿಂದಲೇ ಆಗಲಿ ಹಣ ಕೇಳುವ ಪರಿಸ್ಥಿತಿ ಬರಲಿಲ್ಲ. ಅದಕ್ಕೆ ಬದಲಾಗಿ ಕೆಲವು ಮಹನೀಯರು ನನ್ನಿಂದ ಯಾವುದೇ ಕೋರಿಕೆ ಇಲ್ಲದೇ ನನ್ನ ವಿದ್ಯಾಭ್ಯಾಸಕ್ಕಾಗಿ ದೊಡ್ಡ ಮೊತ್ತದ ಸಹಾಯ ನೀಡಿದರು. ಬಗ್ಗೆ ಮುಂದಿನ ಅಧ್ಯಾಯಗಳಲ್ಲಿ ಬರೆಯುತ್ತೇನೆ.
------- ಮುಂದುವರಿಯುವುದು-----