Tuesday, April 21, 2020

ಬಾಲ್ಯ ಕಾಲದ ನೆನಪುಗಳು – ೭೯


ಮೇ ತಿಂಗಳ ಕೊನೆಯಲ್ಲಿ ನಾನು ಹೊಕ್ಕಳಿಕೆಗೆ ಹೋಗಿ ಗೌರಕ್ಕ ಮತ್ತು ರುಕ್ಮಿಣಕ್ಕನ ಮನೆಗಳಲ್ಲಿ ಒಂದು ವಾರ ಕಳೆದೆ. ನನಗೆ ಅಕ್ಕಂದಿರ ಮನೆಯಲ್ಲಿದ್ದಾಗ ಸಮಯ ಹೋದುದೇ ಗೊತ್ತಾಗುತ್ತಿರಲಿಲ್ಲ. ಒಂದು ದಿನ ಮದ್ಯಾಹ್ನದ ಊಟವಾದ ನಂತರ ಗೌರಕ್ಕನ ಮನೆಯಿಂದ ಹೊರಟು ಕೊಪ್ಪಕ್ಕೆ ಬಸ್ ಹಿಡಿಯಲು ಗಡಿಕಲ್ಲಿಗೆ ಬಂದೆ. ಅಲ್ಲಿ ನನಗೆ ಆ ದಿನದ ನ್ಯೂಸ್ ಪೇಪರಿನಲ್ಲಿ ಎಸ್ ಎಸ್ ಎಲ್ ಸಿ  ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆಯೆಂದು ತಿಳಿಯಿತು. ಅಲ್ಲಿನ ಅಂಗಡಿಯೊಂದರಲ್ಲಿದ್ದ ಪೇಪರ್ ನೋಡಿದಾಗ ನಾನು ಪ್ರಥಮ ದರ್ಜೆಯಲ್ಲಿ ಪಾಸ್ ಆದುದು ತಿಳಿಯಿತು.

ನಾನು ರಾತ್ರಿಯಾಗುವಾಗ ಮನೆ ತಲುಪಿದೆ. ನನ್ನ ತಂದೆ ತಾಯಿಯರಿಗೆ ನಾನು ಪಾಸ್ ಆದ ಸಮಾಚಾರ ಪುಟ್ಟಣ್ಣನ ಮೂಲಕ ಗೊತ್ತಾಗಿತ್ತು. ಪುಟ್ಟಣ್ಣನೂ ಪಾಸಾಗಿದ್ದ. ನಾವಿಬ್ಬರೂ ಜೀವನದಲ್ಲಿ ಆ ಮಟ್ಟ ತಲುಪಲು ನಮ್ಮ ಅಣ್ಣನೇ ಕಾರಣನಾಗಿದ್ದ. ಅಣ್ಣನಿಂದ ನಮಗೆ ಅಭಿನಂದನೆ ಮಾಡಿ ಬರೆದ ಪತ್ರವೂ ಬಂತು.

ನಾನು ಶಿವಮೊಗ್ಗೆಗೆ ಹೋಗಿ ನನ್ನ ಮಾರ್ಕ್ಸ್ ಕಾರ್ಡ್ ಮತ್ತು ಟ್ರಾನ್ಸ್ಫರ್ ಸರ್ಟಿಫಿಕೇಟುಗಳನ್ನು ತೆಗೆದುಕೊಂಡೆ. ನನಗೆ ಎಲ್ಲಾ ಸಬ್ಜೆಕ್ಟ್ ಗಳಲ್ಲೂ ಅತ್ತ್ಯುತ್ತಮ ಅಂಕಗಳು ಬಂದಿದ್ದವು. ಅರುಣಾಚಲಂ ಮೇಷ್ಟ್ರು ಮತ್ತು ಬೇರೆ ನನ್ನ ಹಿತೈಷಿಗಳು ನನ್ನ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಪ್ರಶ್ನಿಸಿದಾಗ ನಾನು ನನ್ನ ಕುಟುಂಬಕ್ಕೆ ನನ್ನನ್ನು ಮುಂದೆ ಕಾಲೇಜಿನಲ್ಲಿ ಓದಿಸುವಷ್ಟು ಅನುಕೂಲ ಇಲ್ಲವೆಂದು ಹೇಳಿಬಿಟ್ಟೆ. ಮೇಷ್ಟ್ರು ನನಗೆ "ಹಲ್ಲಿದ್ದವರಿಗೆ ಕಡಲೆ ಇಲ್ಲ ಮತ್ತು ಕಡಲೆ ಇದ್ದವರಿಗೆ ಹಲ್ಲಿಲ್ಲ" ಎಂಬ  ಗಾದೆಯನ್ನು ಹೇಳಿ ತಮ್ಮ ವ್ಯಥೆಯನ್ನು ವ್ಯಕ್ತ ಪಡಿಸಿದರು.

ನಾನು ಕಾಲೇಜಿನಲ್ಲಿ ಓದುವ ಆಸೆಯನ್ನು ಕೈಬಿಟ್ಟಿದ್ದೆ. ಆ ದಿನಗಳಲ್ಲಿ ಪೋಸ್ಟ್ ಆಫೀಸಿನ ಕ್ಲರಿಕಲ್ ನೌಕರಿಗೆ ಅಭ್ಯರ್ಥಿಗಳ ಎಸ್ ಎಸ್ ಎಲ್ ಸಿ  ಮಾರ್ಕ್ಸ್ ಆಧಾರದ ಮೇಲೆ ಡೈರೆಕ್ಟ್ ಸೆಲೆಕ್ಷನ್ ಮಾಡುತ್ತಿದ್ದರು. ಆಗಿನ್ನೂ ನನಗೆ ೧೮ ವರ್ಷ ವಯಸ್ಸಾಗಿರಲಿಲ್ಲ. ಆದ್ದರಿಂದ ನಾನು ಮುಂದಿನ ವರ್ಷದವರೆಗೆ ಆ ನೌಕರಿಗಾಗಿ ಕಾಯಬೇಕಾಗಿತ್ತು. ನಾನು ನನ್ನ ತಂದೆ ತಾಯಿಯವರ ಹತ್ತಿರ ವರ್ಷವಿಡೀ ಮನೆಗೆಲಸದಲ್ಲಿ ಅವರಿಗೆ ನೆರವಾಗುವುದಾಗಿ ಹೇಳಿಬಿಟ್ಟೆ. ಅಲ್ಲಿಯವರೆಗೆ ನಾನು ಹೊಂದಿದ್ದ ಮಹತ್ವಾಕಾಂಕ್ಷೆಗಳೆಲ್ಲಾ ಮಾಯವಾಗಿ ಹೋಗಿದ್ದವು. ವಿದ್ಯಾಭ್ಯಾಸ ಮುಂದುವರಿಸಿ ಸಮಾಜದಲ್ಲಿ ಒಂದು ಒಳ್ಳೆಯ ಸ್ಥಾನ ಗಳಿಸಬೇಕೆಂಬ ಆಸೆಗಳೆಲ್ಲ ನುಚ್ಚು ನೂರಾಗಿ ಹೋಗಿದ್ದವು.

ಪುಟ್ಟಣ್ಣನ ಬೆಂಗಳೂರು ಪಯಣ
ಆದರೆ  ನನ್ನಣ್ಣ ಪುಟ್ಟಣ್ಣನ ಗುರಿಯೇ ಬೇರೆಯಾಗಿತ್ತು. ಅವನು ಹೇಗಾದರೂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಲೇ ಬೇಕೆಂಬ ಧೃಡ ನಿರ್ಧಾರ ಮಾಡಿಬಿಟ್ಟಿದ್ದ.  ಅವನು ಆ ಗುರಿಯತ್ತ ಪ್ರಯತ್ನ ಮಾಡುತ್ತಲೇ ಇದ್ದ. ಅವನ ಅದೃಷ್ಟಕ್ಕೆ ಅವನು ಅಲ್ಲಿಯವರೆಗೆ ತಂಗಿದ್ದ  ಹಂಚಿನಮನೆ ಸುಬ್ರಹ್ಮಣ್ಯ (ನಮ್ಮ ಕಸಿನ್)  ಅವರು ಅವನಿಗೆ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಲು ಹಣದ ಸಹಾಯ ಮಾಡುವುದಾಗಿ ಹೇಳಿದರು. ಅದನ್ನು ಒಂದು ಚಾಲೆಂಜ್ ಆಗಿ ಸ್ವೀಕರಿಸಿ ಪುಟ್ಟಣ್ಣ ಒಂದು ದಿನ ಬೆಂಗಳೂರಿಗೆ ಹೊರಟು ಹೋಗಿಯೇ ಬಿಟ್ಟ!

ನನ್ನ ವಿದ್ಯಾರ್ಥಿ ಜೀವನ ಕೊನೆಗೊಂಡಿತೇ?
ನಾನೇನೋ  ಮುಂದೆ ವಿದ್ಯಾಭ್ಯಾಸ ಮಾಡುವುದಿಲ್ಲವೆಂದು ನಿರ್ಧಾರ ಮಾಡಿಬಿಟ್ಟಿದ್ದೆ.  ಆದರೆ ಪುಟ್ಟಣ್ಣ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಲು ಹೋದನೆಂದು ಗೊತ್ತಾದ ಮೇಲೆ ನಮ್ಮ ಊರಿನವರಿಗೆ ನಾನು ಮಾತ್ರ ತಂದೆಯವರೊಡನೆ ಕೊಪ್ಪ ಸಂತೆಗೆ ಬಾಳೆಹಣ್ಣು ಮತ್ತು ವೀಳ್ಯದೆಲೆಯನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ನೋಡಿ ಆಶ್ಚರ್ಯವಾಯಿತು.  ಅವರು ನಾನು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು ಹಾಸ್ಟೆಲಿನಲ್ಲಿ ಫ್ರೀ ಸೀಟ್ ಇದ್ದರೂ ಏಕೆ ಓದಲು ಹೋಗುತ್ತಿಲ್ಲವೆಂದು ಪ್ರಶ್ನಿಸ ತೊಡಗಿದರು. ಆಗ ನನ್ನ ತಂದೆ ತಾಯಿಯವರ ಮನಸ್ಸಿಗೆ ತುಂಬಾ ಹಿಂಸೆಯಾಗತೊಡಗಿತು.

ಒಂದು ಸಂಜೆ ನಾನು ಕೆರೆಯೊಂದರಿಂದ ನಮ್ಮ ತೋಟಕ್ಕೆ ನೀರು ಹಾಯಿಸುತ್ತಿದ್ದೆ. ಕೆರೆಯ ನೀರೆಲ್ಲಾ ಖಾಲಿಯಾದ ಮೇಲೆ ನಾನು ಕೆರೆಯೊಳಗಿಳಿದು ಅದರಲ್ಲಿ ಪುನಃ ರಾತ್ರಿಯಲ್ಲಿ ನೀರು ತುಂಬಲು ತೂಬಿಗೆ ಸೀಲ್ ಮಾಡಿ ನಂತರ ಕೆರೆಯಲ್ಲೇ ನಿಂತಿದ್ದೆ. ನನ್ನ ಮನಸ್ಸು ನನ್ನ ಫ್ಯೂಚರ್ ಬಗ್ಗೆ ಚಿಂತೆಯಲ್ಲಿ  ತೊಡಗಿತು. ಆಗ ತಾನೆ ಸೂರ್ಯ ಪಶ್ಚಿಮ ದಿಕ್ಕಿನಲ್ಲಿ ಮುಳುಗತೊಡಗಿದ್ದ. ನನಗೆ ಇದ್ದಕ್ಕಿದ್ದಂತೆ ನನ್ನ ವಿದ್ಯಾರ್ಥಿ ಜೀವನವೂ ಸಂಜೆಯ ಸೂರ್ಯನಂತೆ ಮುಳುಗಿ ಹೋಗುತ್ತಿದ್ದಂತೆ ಭಾಸವಾಯಿತು. ನನ್ನ ಪ್ರೀತಿಯ ಅಣ್ಣ ನನ್ನ ವಿದ್ಯಾಭ್ಯಾಸಕ್ಕಾಗಿ ಎಷ್ಟೊಂದು ಹೋರಾಟ ಮಾಡಿದ್ದ. ಆದರೆ ನಾನು ಹೀಗೆ ನನ್ನ ಮುಂದಿನ ಜೀವನದ ಬಗ್ಗೆ ಒಂದು ಸಂದಿಗ್ದ ಪರಿಸ್ಥಿತಿಯಲ್ಲಿರುವಾಗ ಅವನು ನನ್ನ ಜೊತೆಯಲ್ಲಿರಲಿಲ್ಲ. ಇದ್ದಕ್ಕಿದ್ದಂತೆ ನಾನೊಂದು ದುಃಖ್ಖ ಸಮುದ್ರದಲ್ಲಿ ಮುಳುಗಿ ಹೋಗುತ್ತಿರುವಂತೆ ಅನಿಸತೊಡಗಿತು. ಅದರಿಂದ ಈಜಿ ಹೊರಗೆ ಬರಬೇಕೆಂದೂ ನನಗೆ ಅನಿಸಲಿಲ್ಲ.

ಆಗ ಇದ್ದಕ್ಕಿದ್ದಂತೆ ನನಗೆ ನನ್ನ ತಂದೆಯವರು ಗಟ್ಟಿಯಾಗಿ ನನ್ನ ಹೆಸರನ್ನು ಹೇಳಿ ಕೂಗುತ್ತಿರುವುದು ಕೇಳಿಸಿತು. ಹೌದು ಅದು ನಿಜವಾಗಿತ್ತು. ನಾನು (ಸಮುದ್ರದಲ್ಲಲ್ಲ)  ಕೆರೆಯಲ್ಲೇ ಮುಳುಗಿ ಹೋಗುವುದರಲ್ಲಿದ್ದೆ. ಕೆರೆಯ ನೀರು ವೇಗವಾಗಿ ತುಂಬುತ್ತಾ ಆಗಲೇ ನನ್ನ ಸೊಂಟದ ಮೇಲೆ ಬಂದು ಬಿಟ್ಟಿತ್ತು! ನನಗದರ ಅರಿವೇ ಇರಲಿಲ್ಲ!
------- ಮುಂದುವರಿಯುವುದು-----

Saturday, April 18, 2020

ಬಾಲ್ಯ ಕಾಲದ ನೆನಪುಗಳು – ೭೮


ನಮ್ಮ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆ ಮಾರ್ಚ್ ತಿಂಗಳಲ್ಲಿ ನಡೆಯಿತು. ನಾನು ಎಲ್ಲಾ ಪ್ರಶ್ನೆ ಪತ್ರಿಕೆಗಳಿಗೂ ಚೆನ್ನಾಗಿಯೇ ಉತ್ತರ ಬರೆದಿದ್ದೆ. ಪರೀಕ್ಷೆ ಮುಕ್ತಾಯವಾಗುತ್ತಿದ್ದಂತೇ ನನಗೆ ಇನ್ನು ಮುಂದೆ ನಾನು ಈ ಶಾಲೆಗೆ ಹೋಗುವ ಪ್ರಶ್ನೆ ಇಲ್ಲವೆಂದು ಯೋಚಿಸುವಾಗ ಮನಸ್ಸಿಗೆ ಒಂದು ಬಗೆಯ ಹಿಂಸೆ ಆಯಿತು. ಅಲ್ಲದೇ ನನಗೆ ತುಂಬಾ ಆತ್ಮೀಯ ಮಿತ್ರರೂ ಈ ಶಾಲೆಯಲ್ಲಿ ದೊರೆತಿದ್ದರು. ಹೌದು.  ನಾನು  ಭಾವನಾತ್ಮಕವಾಗಿ ನಮ್ಮ ಶಾಲೆಯನ್ನು ತುಂಬಾ ಹಚ್ಚಿಕೊಂಡು ಬಿಟ್ಟಿದ್ದೆ. ನನ್ನ ಅಣ್ಣ ಎಷ್ಟೊಂದು ಹೋರಾಟ ಮಾಡಿ ನನ್ನನ್ನು  ಇಂತಹ ಅತ್ತ್ಯುತ್ತಮ ಮೇಷ್ಟ್ರುಗಳಿದ್ದ ಶಾಲೆಗೆ ಅದರಲ್ಲೂ ಇಂಗ್ಲಿಷ್ ಮೀಡಿಯಂ ಗೆ ಸೇರಿಸಿದ್ದ. ಆ ಮೂಲಕ ನನ್ನ ಸ್ಟೂಡೆಂಟ್ ಕ್ಯಾರಿಯರ್ ಗೆ ಒಂದು ಭದ್ರ ಬುನಾದಿ ಹಾಕಿದ್ದ. ಅದಕ್ಕಾಗಿ ನಾನು ಜೀವನ ಪರ್ಯಂತ ಅವನಿಗೆ ಋಣಿಯಾಗಿದ್ದೆ.

ಹಾಸ್ಟೆಲಿನಿಂದಲೂ ವಿದಾಯ!
ನಮ್ಮ ಶಾಲೆಯಂತೆ ನಮ್ಮ ಹಾಸ್ಟೆಲಿಗೆ ನಾನು ವಿದಾಯ ಹೇಳುವ ಪ್ರಶ್ನೆ ಇರಲಿಲ್ಲ. ಏಕೆಂದರೆ ನಾನು ಪರೀಕ್ಷೆಯಲ್ಲಿ ತುಂಬಾ ಚೆನ್ನಾಗಿಯೇ ಉತ್ತರ ಬರೆದಿದ್ದರಿಂದ ಹಾಸ್ಟೆಲಿನಲ್ಲಿ ನನ್ನ ಫ್ರೀ ಸೀಟ್ ಮುಂದೆ ಕಾಲೇಜಿನಲ್ಲಿ ಓದಲೂ ಹಾಗೆಯೇ ಮುಂದುವರಿಯುವುದು ಗ್ಯಾರಂಟಿ ಆಗಿತ್ತು. ಆದರೆ ನನಗೇನೋ ನಾನು ಪುನಃ ಹಾಸ್ಟೆಲಿನಲ್ಲಿ ಇರುವೆನೆಂದು ಅನಿಸಲೇ ಇಲ್ಲ. ಕಾರಣವಿಷ್ಟೇ. ನಮ್ಮ ಕುಟುಂಬದ ವಾರ್ಷಿಕ ಆದಾಯವನ್ನು ಗಮನಿಸಿದರೆ ನಾನು ಪರರ ಸಹಾಯವಿಲ್ಲದೇ ನನ್ನ ಓದನ್ನು ಮುಂದುವರಿಸುವುದು ಅಸಾಧ್ಯವೆಂದು ನನಗೆ ಅನಿಸಿತ್ತು. ಆದರೆ ನಾನು ಹಿಂದಿನ ವರ್ಷದಂತೆ ಪುನಃ ನನ್ನ ಖರ್ಚಿಗಾಗಿ ಚಂದಾ ಎತ್ತುವ ಕೆಲಸ ಮಾಡುವುದಿಲ್ಲವೆಂದು ತೀರ್ಮಾನ ಮಾಡಿ ಬಿಟ್ಟಿದ್ದೆ. ಇನ್ನೊಬ್ಬರ ಋಣದ ಆಸರೆಯಲ್ಲಿ ವಿದ್ಯಾಭ್ಯಾಸ ಮಾಡುವುದು ನನಗೆ ಎಳ್ಳಷ್ಟೂ ಇಷ್ಟವಿರಲಿಲ್ಲ.
ಮರೆಯಲಾಗದ ಹಾಸ್ಟೆಲ್ ಅನುಭವ
ನನ್ನ ಜೀವಮಾನದಲ್ಲಿ ನನ್ನ ಮೂರು ವರ್ಷದ ಹಾಸ್ಟೆಲ್ ಅನುಭವ ತುಂಬಾ ಅಮೂಲ್ಯದಾಗಿತ್ತು. ನಾನು ಈ ಹಿಂದೆ ಮೂರು ವರ್ಷ ಹೊಕ್ಕಳಿಕೆಯಲ್ಲಿ ಅಕ್ಕನ ರಕ್ಷಣಾತ್ಮಕ ಕವಚದಲ್ಲಿ ಯಾವುದೇ ಸಮಸ್ಯೆಗಳಿಲ್ಲದೇ ಕಾಲ ಕಳೆದಿದ್ದೆ. ಆದರೆ ಹಾಸ್ಟೆಲಿನ ಸಾಮೂಹಿಕ ಜೀವನ ಸಂಪೂರ್ಣ ಬೇರೆಯೇ ಆಗಿತ್ತು. ಇಲ್ಲಿ ನನ್ನ ರಕ್ಷಣೆಗಾಗಿ ಯಾರೂ ನಿಲ್ಲುವ ಪ್ರಶ್ನೆ ಇರಲಿಲ್ಲ. ಆದರೆ ಬೇರೆ ಬೇರೆ ಊರಿನ ಹಾಗೂ ಬೇರೆ ಬೇರೆ ತರಗತಿಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳೊಡನೆ ಸಹ ಬಾಳ್ವೆ ಮಾಡುವ ಅವಕಾಶ  ಒಂದು ಅಪರೂಪದ ಅವಕಾಶವೇ ಆಗಿತ್ತು. ಅದರಲ್ಲೂ ಕಾಲೇಜಿನಲ್ಲಿ ಓದುತ್ತಿದ್ದ ಹಿರಿಯ ವಿದ್ಯಾರ್ಥಿಗಳ ಸಹವಾಸ ನನ್ನಂತಹ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ತುಂಬಾ ಲಾಭದಾಯಕವಾಗಿತ್ತು. ಹಾಸ್ಟೆಲಿನ ಕಠಿಣ ಶಿಸ್ತಿನ ಜೀವನ ನನ್ನ ದೈನಂದಿನ ನಡೆ ನುಡಿಯಲ್ಲೂ ಒಂದು ಬಗೆಯ  ಶಿಸ್ತನ್ನು ಪಾಲಿಸಿಕೊಂಡು ಹೋಗುವಂತೆ ಮಾಡಿತ್ತು. ಹಾಗೆಯೇ ಅಲ್ಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ನನ್ನ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದವೆಂಬುವುದರಲ್ಲಿ ಯಾವುದೇ ಸಂದೇಹವಿರಲಿಲ್ಲ.

ನಮ್ಮ ಮನೆಯ ಬೇಸಿಗೆ ಕಾಲದ ಚಟುವಟಿಕೆಗಳು
ಪುಟ್ಟಣ್ಣ ಮತ್ತು ನಾನು ಹಿಂದಿನ ವರ್ಷದಂತೇ ನಾವು ಬೇಸಿಗೆಯಲ್ಲಿ ಮಾಡಬೇಕಾದ ಮನೆ ಕೆಲಸಗಳ ಒಂದು ವೇಳಾಪಟ್ಟಿಯನ್ನು ತಯಾರು ಮಾಡಿ ಅದರಂತೆ ಕಾರ್ಯಗಳನ್ನು ಮಾಡಲಾರಂಭಿಸಿದೆವು. ನಮ್ಮ ಒಂದು ಎಕರೆ ಅಡಿಕೆ ತೋಟದ ಬೆಳೆಯ ಆದಾಯ ಆ ವರ್ಷ ನಮ್ಮ ತಂದೆಯವರ ಕೈಗೆ ಬಂದಿತ್ತು. ಆದರೂ ಬೇರೆ ಆದಾಯಗಳಿಲ್ಲದೆ ನಮ್ಮ ದೊಡ್ಡ ಸಂಸಾರದ ಖರ್ಚು ವೆಚ್ಚಗಳನ್ನು ಸರಿದೂಗಿಸಿವುದು ಸಾಧ್ಯವಿರಲಿಲ್ಲ. ಆಗ ನಮ್ಮ ತಂದೆಯವರು ಒಂದು ಹೊಸ ಆದಾಯದ ಮೂಲವನ್ನು ಕಂಡು ಹಿಡಿದರು. ಬಿ ಜಿ ಕಟ್ಟೆಯ ಬಳಿ ಸೀತಾ ನದಿಗೆ ಸೇತುವೆ ಕಟ್ಟುವ ಕೆಲಸ ಆಗ ಭರದಿಂದ ಸಾಗಿತ್ತು. ಹೆಚ್ಚಿನ ಕೆಲಸಗಾರರು ತಮಿಳಿನವರಾಗಿದ್ದು ಅವರು ನದಿಯ ಹತ್ತಿರದಲ್ಲೇ ಒಂದು ಕ್ಯಾಂಪ್ ಮಾಡಿದ್ದರು. ಆ ಕೆಲಸಗಾರರಿಗೆ ಬಾಳೆಹಣ್ಣು ಒಂದು ಮುಖ್ಯ ಆಹಾರವೇ ಆಗಿತ್ತು. ಪುಟ್ಟಣ್ಣ ಮತ್ತು ನಾನು ತಂದೆಯವರೊಡನೆ ವಾರಕ್ಕೆರಡು ಬಾರಿ ಬಾಳೆಹಣ್ಣಿನ ಬುಟ್ಟಿಗಳೊಡನೆ ಬಿ ಜಿ ಕಟ್ಟೆಗೆ ಹೋಗಿ ಹಣ್ಣನ್ನು ಒಳ್ಳೆಯ ಬೆಲೆಗೆ ಅವರಿಗೆ ಮಾರುತ್ತಿದ್ದೆವು. ಕೆಲಸಗಾರರು ಒಮ್ಮೆಗೇ ನಮ್ಮ ಬುಟ್ಟಿಗಳ ಮೇಲೆ ಮುಗಿ ಬೀಳುತ್ತಿದ್ದುದನ್ನು ಗಮನಿಸಿದ ತಂದೆಯವರು ಸ್ವಲ್ಪ ಹೆಚ್ಚಿಗೆ ಬೆಲೆ ಹೇಳುತ್ತಿದ್ದರಿಂದ ಅವರ ಕೈಗೆ ಹೆಚ್ಚು ಹಣ ಬರುತ್ತಿತ್ತು.

ಭುವನಕೋಟೆಯಿಂದ ಅಡಿಕೆ ಸೋಗೆಯ ಸಾಗಾಣಿಕೆ
ಆ ವರ್ಷ ನಮಗೆ ಹೊಸದೊಂದು ಕೆಲಸ ಅಂಟಿಕೊಂಡಿತು. ನಮ್ಮ ತೋಟದ ಅಡಿಕೆ ಸೋಗೆ ನಮ್ಮ ಮನೆ, ಕೊಟ್ಟಿಗೆ ಮತ್ತು ದನದ ಕೊಟ್ಟಿಗೆಗಳನ್ನು ಹೊಚ್ಚಲು ಸಾಲದೇ ಹೋಯಿತು. ಆಗ ಬೆಳವಿನಕೊಡಿಗೆ ಗಣೇಶಯ್ಯನವರ ಕಿರಿಯ ಸಹೋದರ ವೆಂಕಪ್ಪಯ್ಯನವರು ಭುವನಕೋಟೆಯಲ್ಲಿ ಅವರ ಮನೆಯ ಮುಂದಿದ್ದ ತೋಟದಲ್ಲಿ ಶೇಖರಿಸಿಟ್ಟ ಅಡಿಕೆ ಸೋಗೆಗಳನ್ನು ಹಾಳೆಗಳಿಂದ ಬೇರ್ಪಡಿಸಿ ನಮ್ಮ ಮನೆಗೆ ತೆಗೆದುಕೊಂಡು ಹೋಗಲು ಅನುಮತಿ ನೀಡಿದರು.

ಈ ಕಾರ್ಯವೇನು ಸಾಮಾನ್ಯ ಮಟ್ಟದ್ದಾಗಿರಲಿಲ್ಲ. ಏಕೆಂದರೆ ವೆಂಕಪ್ಪಯ್ಯನವರ ತೋಟ ಅವರ ಮನೆಯಿಂದ ತುಂಬಾ ಕೆಳಮಟ್ಟದಲ್ಲಿತ್ತು. ಅಲ್ಲಿ ನಾವು ಸೋಗೆ ಕಡಿದು ಹೊರೆ ಮಾಡಿದ  ನಂತರ ಅವನ್ನು ತಲೆಯ ಮೇಲೆ ಹೊತ್ತುಕೊಂಡು ಅವರ ಮನೆಯ ಹತ್ತಿರ ಬಂದು, ಪುನಃ ಒಂದು ಎತ್ತರದ ಗುಡ್ಡವನ್ನು ಹತ್ತಿ ಅದನ್ನು ಒಂದು ಕಾಲುದಾರಿಯ ಮೂಲಕ ಇಳಿದು ನಮ್ಮ ತೋಟ ತಲುಪಿ ಅಲ್ಲಿಂದ ಪುನಃ ತೋಟದ ಮೇಲ್ಭಾಗದಲ್ಲಿದ್ದ ನಮ್ಮ ಮನೆಯನ್ನು ತಲುಪ ಬೇಕಿತ್ತು. ಯಾವ ಆಳುಗಳ ಸಹಾಯವಿಲ್ಲದೆ ಪುಟ್ಟಣ್ಣ ಮತ್ತು ನಾನು ತಂದೆಯವರೊಡನೆ ಈ ಕ್ಲಿಷ್ಟ ಕಾರ್ಯವನ್ನು ಮುಗಿಸಿಯೇ ಬಿಟ್ಟೆವು. ಇಂದು ಎಷ್ಟೋ ವರ್ಷಗಳ ನಂತರ ಹಿಂತಿರುಗಿ ನೋಡುವಾಗ ನಾವು ಆಗ ಮಾಡಿದ ಈ ಸಾಹಸದ ಬಗ್ಗೆ ತುಂಬಾ ಹೆಮ್ಮೆ ಎಂದು ಅನಿಸುತ್ತಿದೆ.

ತಿಮ್ಮೇ ಶೆಟ್ಟಿ ಕಂತ್ರಾಟು!
ನಮ್ಮ ತೋಟಕ್ಕೆ ಪ್ರತಿ ವರ್ಷವೂ ಮಾಡಲೇ ಬೇಕಾದ ಆದರೆ ನಮ್ಮ ಕೈಯಲ್ಲಿ ಮಾಡಲಾಗದ ಕೆಲಸ ಒಂದಿತ್ತು. ಅದೇ ಅದರ ಬೇಸಾಯ. ಜಮೀನನ್ನು ಮೂರು ಭಾಗವಾಗಿ ವಿಂಗಡಿಸಿ ಪ್ರತಿ ವರ್ಷ ಒಂದೊಂದು ಭಾಗಕ್ಕೆ ಅಗತೆ ಮಾಡಿಸಿ, ಗೊಬ್ಬರ ಹಾಕಿಸಿ, ಸೊಪ್ಪು ಮುಚ್ಚಿ ನಂತರ ಹೊಸ ಮಣ್ಣನ್ನು ಮುಚ್ಚ ಬೇಕಾಗಿತ್ತು. ಈ ಕೆಲಸವನ್ನು ಸಾಮಾನ್ಯವಾಗಿ ನಕ್ರ ಪೂಜಾರಿಯಂತಹ ಗುತ್ತಿಗೆದಾರರಿಗೆ ಕೊಡಲಾಗುತ್ತಿತ್ತು. ಅವರ ಕೈ ಕೆಳಗೆ ತುಂಬಾ ಕೂಲಿ ಕೆಲಸಗಾರರು ಇರುತ್ತಿದ್ದರು. ಆದರೆ ನಮ್ಮಂತಹ ಸಣ್ಣ ಹಿಡುವಳಿದಾರರಿಗೆ ನಕ್ರನಂತಹ ದೊಡ್ಡ ಗುತ್ತಿಗೆದಾರನಿಗೆ ಕೊಡುವ ಮಟ್ಟದ ಕೆಲಸ ಇರುತ್ತಿರಲಿಲ್ಲ.

ಆದರೆ ನಾವು ಸಹ ಗುತ್ತಿಗೆ ನೀಡಬಹುದಾದ ಒಬ್ಬ ಗುತ್ತಿಗೆದಾರ ಆಗ ದಕ್ಷಿಣ ಕನ್ನಡದಿಂದ ನಮ್ಮೂರಿಗೆ ಬರುತ್ತಿದ್ದ. ಅವನೇ ತಿಮ್ಮೇ ಶೆಟ್ಟಿ. ತಿಮ್ಮೇ ಶೆಟ್ಟಿಯ ಬಳಿ ಕೇವಲ ಒಬ್ಬನೇ ಕೆಲಸಗಾರನಿದ್ದ . ಅದು ಬೇರೆ ಯಾರೂ ಅಲ್ಲ. ಅದು ತಿಮ್ಮೇ ಶೆಟ್ಟಿಯೇ! ಅವನದು ಒನ್ ಮ್ಯಾನ್ ಆರ್ಮಿ ಆಗಿತ್ತು. ಅವನೆಂದೂ ದಿನ ಕೂಲಿ ಮಾಡಿದವನಲ್ಲ. ಪ್ರತಿಯೊಂದು ಕೆಲಸವನ್ನೂ ಅವನಿಗೆ ಗುತ್ತಿಗೆಯ ಮೂಲಕವಾಗಿಯೇ ಕೊಡಬೇಕಿತ್ತು. ಆದರೆ ಪ್ರತಿ ಗುತ್ತಿಗೆಯೂ ಒಂದು ಶರತ್ತಿನಿಂದ ಕೂಡಿರುತ್ತಿತ್ತು. ನಿಯಮಿಸಲಾದ ಮೊತ್ತದ ಹಣವಲ್ಲದೇ ಅವನಿಗೆ ಮನೆಯಲ್ಲೇ ಊಟ ಮತ್ತು ತಿಂಡಿ ನೀಡ ಬೇಕಿತ್ತು. ಅಲ್ಲದೇ ಮನೆಯಲ್ಲೇ ತಂಗಲೂ ಅವಕಾಶ ಕೊಡಬೇಕಿತ್ತು. ತಿಮ್ಮೇ ಶೆಟ್ಟಿಯ ಈ ಗುತ್ತಿಗೆ ಎಷ್ಟು ಪ್ರಸಿದ್ಧಿಯಾಗಿತ್ತೆಂದರೆ ಅದಕ್ಕೆ "ತಿಮ್ಮೇ ಶೆಟ್ಟಿ ಕಂತ್ರಾಟು" ಎಂದೇ ಕರೆಯಲಾಗುತ್ತಿತ್ತು! ನಾವು ಆ ವರ್ಷ ನಮ್ಮ ತೋಟದ ಬೇಸಾಯದ ಪೂರ್ತಿ ಗುತ್ತಿಗೆಯನ್ನು ತಿಮ್ಮೇ ಶೆಟ್ಟಿಗೆ ಕೊಟ್ಟು ಬಿಟ್ಟೆವು.

ತಿಮ್ಮೇ ಶೆಟ್ಟಿಯ ವಿಶೇಷತೆ
ತಿಮ್ಮೇ ಶೆಟ್ಟಿ ಒಬ್ಬ ೨೬-೨೭ ವರ್ಷ ವಯಸ್ಸಿನ ಸ್ಪುರದ್ರೂಪಿ ಯುವಕನಾಗಿದ್ದ. ಆಗಿನ ಕಾಲದ ಬೇರೆ ಕೆಲಸಗಾರರಂತೆ ಅವನೆಂದೂ ಕೊಳೆಯಾದ ಬಟ್ಟೆಗಳನ್ನು ಹಾಕಿ ಕೊಳ್ಳುತ್ತಿರಲಿಲ್ಲ. ಕೆಲಸ ಮಾಡುವಾಗ ಧರಿಸಲೆಂದೇ ಒಂದು ಸ್ಪೆಷಲ್ ಡ್ರೆಸ್ ಹೊಲಿಸಿದ್ದ. ಅದನ್ನು ವಾರದ ಕೊನೆಯಲ್ಲಿ ತೊಳೆದು ಶುಭ್ರ ಮಾಡಿ ಪುನರ್ಬಳಕೆ ಮಾಡುತ್ತಿದ್ದ. ತೋಟದ ಬೇಸಾಯದ ಕೆಲವು ಕೆಲಸಗಳನ್ನು (ಗೊಬ್ಬರದ ಗುಂಡಿಯಿಂದ ಗೊಬ್ಬರ ತೋಡಿ ತೋಟಕ್ಕೆ ಸಾಗಿಸುವುದು,ಇತ್ಯಾದಿ) ಮಾಡಲು ಕಡಿಮೆ ಎಂದರೆ ಇಬ್ಬರು ಕೆಲಸಗಾರರು ಬೇಕಾಗುತ್ತಿತ್ತು. ಆದರೆ ಒಂಟಿ ಸಲಗನಂತಿದ್ದ ತಿಮ್ಮೇ ಶೆಟ್ಟಿ ಅದನ್ನೂ ತಾನು ಒಬ್ಬನೇ ಮಾಡುವಷ್ಟು ಸಮರ್ಥನಾಗಿದ್ದ!

ತಿಮ್ಮೇ ಶೆಟ್ಟಿಗೆ ಬೇರೆ ಕೆಲಸಗಾರರಿಗಿಲ್ಲದ ಇನ್ನೊಂದು ಅಭ್ಯಾಸವಿತ್ತು. ಅವನು ಪ್ರತಿ ಸಂಜೆಯೂ ಸ್ನಾನ ಮುಗಿಸಿದ ನಂತರವೇ ಊಟ ಮಾಡುತ್ತಿದ್ದ! ವಾರದ ಆರು ದಿನಗಳು ಕಠಿಣ ಕೆಲಸಗಳನ್ನು ಮಾಡುತ್ತಿದ್ದ ಶೆಟ್ಟಿ ಭಾನುವಾರ ಮಾತ್ರಾ ಪೂರ್ತಿ ರಜೆ ತೆಗೆದುಕೊಳ್ಳುತ್ತಿದ್ದ. ಆ ದಿನ ಅವನು ಗುರುತೇ ಸಿಗದಂತಹ ಸ್ಪೆಷಲ್ ಡ್ರೆಸ್ ಧರಿಸಿ ಸಿನಿಮಾ ಹೀರೋ ಅಂತೇ ಕೈಯಲ್ಲಿ ಒಂದು ಟಾರ್ಚ್ ಹಿಡಿದುಕೊಂಡು ಮನೆಯಿಂದ ಹೊರಟು ಬಿಡುತ್ತಿದ್ದ. ಆ ದಿನ ಎಲ್ಲಿ ಒಳ್ಳೆಯ ಸಿನಿಮಾ ಇರುವುದೋ ಅಲ್ಲಿಗೆ (ಕೊಪ್ಪ, ಶೃಂಗೇರಿ ಅಥವಾ ಜಯಪುರಕ್ಕೆ) ಅವನ ಪಯಣ. ಅರ್ಧ ರಾತ್ರಿಯ ವೇಳೆಗೆ ಶೆಟ್ಟಿ ಕೈಯಲ್ಲಿ ಟಾರ್ಚ್ ಹಿಡಿದು ಯಾವುದೋ ಒಂದು ಸಿನಿಮಾದ ಹಾಡನ್ನು ಗುನುಗುತ್ತಾ ವಾಪಾಸ್ ಮನೆ ತಲುಪುತ್ತಿದ್ದ.

ಸಾಮಾನ್ಯವಾಗಿ ಮನೆಯ ಹೆಂಗಸರಿಗೆ ತಿಮ್ಮೇ ಶೆಟ್ಟಿ ಕಂತ್ರಾಟು ಅಷ್ಟು ಇಷ್ಟವಾಗುತ್ತಿರಲಿಲ್ಲ. ಏಕೆಂದರೆ ಅವನಿಗಾಗಿ ನಿತ್ಯವೂ ಹೆಚ್ಚು ಅಡಿಗೆ ಮಾಡಿ ಬಡಿಸ ಬೇಕಾಗುತ್ತಿತ್ತು. ಆದರೆ ನಮ್ಮಂತಹ ಸಣ್ಣ ಹಿಡುವಳಿದಾರರಿಗೆ ಈ ಬಗೆಯ ಕಂತ್ರಾಟು ಒಂದು ವರವಾಗಿತ್ತು. ಅಲ್ಲದೇ ಬೇರೆ ಆಳುಗಳಿಗೆ ಕೊಟ್ಟಂತೆ ಶೆಟ್ಟಿಗೆ ನಿತ್ಯವೂ ಒಂದು ಸೇರು ಅಕ್ಕಿ ಅಳೆದು ಕೊಡಬೇಕಾಗಿರಲಿಲ್ಲ. ಆದ್ದರಿಂದ ಅದೊಂದು ಅಗ್ಗದ ಕಂತ್ರಾಟು ಎಂದು ಅನಿಸುತ್ತಿತ್ತು. ಅಲ್ಲದೇ ತಿಮ್ಮೇ ಶೆಟ್ಟಿ ಒಬ್ಬ ಮೃದು ನಡತೆಯ  ಸಂಭಾವಿತ ವ್ಯಕ್ತಿಯಾಗಿದ್ದ. ನಮ್ಮೂರಿನ ಬಾಳೆಹಿತ್ಲು ಎಂಬ ಮನೆಯ ಗಣಪತಯ್ಯ ಎಂಬ ಸಣ್ಣ ಹಿಡುವಳಿದಾರರು ತಿಮ್ಮೇ ಶೆಟ್ಟಿಗೆ ಹೆಚ್ಚು ಕಂತ್ರಾಟು ಕೊಡುತ್ತಿದ್ದರು. ಸಾಮಾನ್ಯವಾಗಿ ನಾವು ಅವರ ಮನೆಗೆ ಹೋದಾಗ ತಿಮ್ಮೇ ಶೆಟ್ಟಿ ಕಣ್ಣಿಗೆ ಬೀಳುತ್ತಿದ್ದ.
------- ಮುಂದುವರಿಯುವುದು-----

Sunday, April 12, 2020

ಬಾಲ್ಯ ಕಾಲದ ನೆನಪುಗಳು – ೭೭


ನಮ್ಮ ಹಾಸ್ಟೆಲಿನಲ್ಲಿ ಒಬ್ಬ ಕಳ್ಳ!
ನಮ್ಮ ಹಾಸ್ಟೆಲಿನಲ್ಲಿ ಇದ್ದಕ್ಕಿದ್ದಂತೇ ವಿದ್ಯಾರ್ಥಿಗಳ ವಿವಿಧ ವಸ್ತುಗಳು ಕಾಣೆಯಾಗ ತೊಡಗಿದವು. ಮೊದಲು ಮೊದಲಿಗೆ ವಿದ್ಯಾರ್ಥಿಗಳ ಹಣ ಮಂಗಮಾಯವಾಗುತ್ತಿದ್ದು ಆಮೇಲೆ ವಾಚುಗಳೂ ಸೇರಿ ಬೇರೆ ಬೇರೆ ವಸ್ತುಗಳೂ ನಾಪತ್ತೆಯಾಗತೊಡಗಿದವು.  ಕೊನೆಗೆ ಅದು ಯಾವ ಮಟ್ಟಕ್ಕೆ ಹೋಯಿತೆಂದರೆ ನಾವು ನಿತ್ಯ ಕುಡಿಯಲು ಬಳಸುತ್ತಿದ್ದ ಸ್ಟೀಲ್ ಲೋಟಗಳೂ ಮಾಯವಾಗತೊಡಗಿದವು. ನಾನು ಸ್ಪೋರ್ಟ್ಸ್ ಕಾಂಪಿಟೀಶನ್ ನಲ್ಲಿ ಒಂದು ಸ್ಟೀಲ್ ಲೋಟವನ್ನು ಗೆದ್ದು ಅದನ್ನು ತುಂಬಾ ಜೋಪಾನವಾಗಿ ಇಟ್ಟುಕೊಂಡಿದ್ದೆ. ಅದರ ಬೆಲೆ ಆರು ರೂಪಾಯಿ. ಅದೂ ಕೂಡ ಅಗೋಚರನಾದ ಕಳ್ಳನ ಕೈಸೇರಿ ಬಿಟ್ಟಿತು. ನಮ್ಮ ಹಾಸ್ಟೆಲಿನ ಸೆಕ್ಯೂರಿಟಿ ವ್ಯವಸ್ಥೆ ತುಂಬಾ ಚೆನ್ನಾಗಿ ಇದ್ದುದರಿಂದ ಯಾವುದೇ ಹೊರಗಿನ ವ್ಯಕ್ತಿ ಬಂದು ಕಳ್ಳತನ ಮಾಡುವ ಅವಕಾಶವಿರಲಿಲ್ಲ. ಆದ್ದರಿಂದ  ಹಾಸ್ಟೆಲಿನ ಒಳಗಿನ ವಿದ್ಯಾರ್ಥಿಯೇ ತನ್ನ ಕೈಚಳಕವನ್ನು ತೋರಿಸುತ್ತಿದ್ದನೆಂದು  ಹಾಸ್ಟೆಲಿನ ಆಡಳಿತ ವರ್ಗಕ್ಕೆ ಅರಿವಾಗಿ ಒಂದು ಆಂತರಿಕ ಪತ್ತೇದಾರಿ ಟೀಮ್ ತಯಾರು ಮಾಡಿ ಅದಕ್ಕೆ ಕಳ್ಳನನ್ನು ಪತ್ತೆ ಮಾಡುವ ಜವಾಬ್ದಾರಿಯನ್ನು ಕೊಡಲಾಯಿತು.

ಜೇಮ್ಸ್ ಬಾಂಡ್ ಟೀಮ್ ಕಳ್ಳನನ್ನು ಪತ್ತೆ ಮಾಡಿದ್ದು!
ಜೇಮ್ಸ್ ಬಾಂಡ್ ಟೀಮು ಕೆಲವು ಅನುಮಾನಾಸ್ಪದ ವಿದ್ಯಾರ್ಥಿಗಳ ಮೇಲೆ ಕಣ್ಣಿಟ್ಟು ನೋಡತೊಡಗಿತು. ಅದು ಎಷ್ಟು ಚೆನ್ನಾಗಿ ಕೆಲಸ ಮಾಡಿತೆಂದರೆ ಒಂದು ದಿನ ಬೆಳಿಗ್ಗೆ ನಾವು ಏಳುವಾಗ ಆಂತರಿಕ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಅವನನ್ನು ಅವನ ಊರಿಗೆ ರವಾನೆ ಮಾಡಲಾಗಿದೆ ಎಂಬ ಅದ್ಭುತ ಸಮಾಚಾರ ನಮಗೆ ಗೊತ್ತಾಯಿತು. ಕಳ್ಳನ ಹೆಸರು ಶಿವಮೂರ್ತಿ ಎಂದಿದ್ದು ಅವನು ಸಹ್ಯಾದ್ರಿ ಕಾಲೇಜಿನಲ್ಲಿ ಬಿಎಸ್ಸಿ ಎರಡನೇ ತರಗತಿಯಲ್ಲಿ ಓದುತ್ತಿದ್ದ.

ಶಿವಮೂರ್ತಿ ಚಿತ್ರದುರ್ಗದ ಒಂದು ಬಡ ಕುಟುಂಬಕ್ಕೆ ಸೇರಿದವನಾಗಿದ್ದ. ಅವನಿಗೆ ಸಿನಿಮಾ ನೋಡುವ ಹುಚ್ಚು ಅತಿ ಹೆಚ್ಚಾಗಿತ್ತಂತೆ. ಅದೆಷ್ಟೆಂದರೆ ಅವನ ಹಾಜರಿ ಸಹ್ಯಾದ್ರಿ ಕಾಲೇಜಿಗಿಂತ ಶಿವಮೊಗ್ಗೆಯ ಥಿಯೇಟರ್ ಗಳಲ್ಲಿ ಹೆಚ್ಚಿತ್ತಂತೆ! ಅವನಿಗೆ ಪ್ರತಿ ದಿನ ಒಂದು ಮಾರ್ನಿಂಗ್ ಶೋ, ಮ್ಯಾಟಿನಿ ಅಥವಾ ಫಸ್ಟ್ ಶೋ ನೋಡಲೇ ಬೇಕಿತ್ತಂತೆ! ಹುಚ್ಚನ್ನು ಅವನು ಹೇಗೆ ನಿಭಾಯಿಸುತ್ತಿದ್ದನೆಂದು ಕೇವಲ ಅವನಿಗೆ ಮಾತ್ರ ಗೊತ್ತಿತ್ತಂತೆ. ಆದರೆ ಅವನಲ್ಲಿ ಒಂದು ಶಿಸ್ತು ಇತ್ತಂತೆ. ಅವನು ಒಂದು ನೋಟ್ ಬುಕ್ಕಿನಲ್ಲಿ ತಾನು ನೋಡಿದ ಸಿನಿಮಾದ ಮತ್ತು ಥಿಯೇಟರಿನ ಹೆಸರು ಮತ್ತು ತಾರೀಖನ್ನು ನೀಟಾಗಿ ಬರೆದಿಡುತ್ತಿದ್ದನಂತೆ! ಶಿಸ್ತೇ ಅವನ ಮುಳುವಿಗೆ ಕಾರಣವಾಯಿತಂತೆ.

ನಡೆದುದಿಷ್ಟೇ. ಜೇಮ್ಸ್ ಬಾಂಡ್  ಟೀಮಿನ ಮುಖ್ಯಸ್ಥನೇ ಶಿವಮೂರ್ತಿಯ ಒಬ್ಬ ರೂಮ್ ಮೇಟ್  ಆಗಿದ್ದ. ಶಿವಮೂರ್ತಿಯ  ನೋಟ್ ಬುಕ್ ಅವನ ಕಣ್ಣಿಗೆ ಬಿತ್ತು.  ಸಹಜವಾಗಿ ಅವನಿಗೆ ಶಿವಮೂರ್ತಿಯ  ಕೈಯಲ್ಲಿ ಅಷ್ಟೊಂದು ಸಿನಿಮಾ ನೋಡುವಷ್ಟು ಹಣ  ಎಲ್ಲಿಂದ ಬರುತ್ತಿರುವುದೆಂಬ ಸಂಶಯ ಬಂತು. ಆದ್ದರಿಂದ ಅವನು ಶಿವಮೂರ್ತಿಯ ಚಟುವಟಿಕೆಗಳ ಮೇಲೆ ಒಂದು ಕಣ್ಣಿಟ್ಟಿದ್ದನಂತೆ. ಹಾಗಿರುವಾಗ ಒಂದು ದಿನ ಶಿವಮೂರ್ತಿ ತನ್ನ ಇನ್ನೊಬ್ಬ ರೂಮ್ ಮೇಟಿನ ಅಂಗಿಯ ಜೇಬಿನಿಂದ ಹಣವನ್ನು ತೆಗೆಯುತ್ತಿರುವುದು ಅವನ ಕಣ್ಣಿಗೆ ಬಿತ್ತಂತೆ. ಅಲ್ಲಿಗೆ ಮುಗಿಯಿತು ಶಿವಮೂರ್ತಿಯ ಕಥೆ. ತಾನು ನೋಡುತ್ತಿದ್ದ ಸಿನಿಮಾಗಳಿಗೆ ಟಿಕೆಟ್ ಚಾರ್ಜ್ ಎಲ್ಲಿಂದ ದೊರೆಯುತ್ತೆಂದು ಹೇಳಲಾಗದ ಶಿವಮೂರ್ತಿ ತಾನು ಮಾಡುತ್ತಿದ್ದ ಕಳ್ಳತನವನ್ನು ಒಪ್ಪಿಕೊಳ್ಳಲೇ ಬೇಕಾಯಿತಂತೆ. ಹಾಸ್ಟೆಲಿನಿಂದ ಹೊರಹಾಕಲ್ಪಟ್ಟ ಅವನನ್ನು ನಾವು ಪುನಃ ಎಂದೂ ನೋಡಲಿಲ್ಲ. ಆದರೆ ಅವನಿಂದಾಗಿ ಹಣ ಮತ್ತು ಇತರ ವಸ್ತುಗಳನ್ನು ಕಳೆದುಕೊಂಡವರಿಗೆ  (ನನ್ನನ್ನೂ ಸೇರಿ) ಯಾವುದೇ ಪರಿಹಾರ ಸಿಗಲಿಲ್ಲ.

ನನ್ನ  ಅಣ್ಣ ಶಿವಮೊಗ್ಗೆ ಸೇರಿದ್ದು
ಇದ್ದಕ್ಕಿದಂತೆ ಒಂದು ದಿನ ನನ್ನ ಅಣ್ಣ ಹಾಸ್ಟೆಲಿಗೆ ಬಂದು ನನ್ನನ್ನು ಭೇಟಿ ಮಾಡಿದ. ಅವನು ತನ್ನ ಸಂಸಾರವನ್ನು ತನ್ನ ಮಾವ ಹುರುಳಿಹಕ್ಲು ಲಕ್ಷ್ಮೀನಾರಾಯಣರಾಯರ ಸಂಸಾರದೊಡನೆ ಶಿವಮೊಗ್ಗೆಗೆ ಶಿಫ್ಟ್ ಮಾಡಿಬಿಟ್ಟಿದ್ದ. ಲಕ್ಷ್ಮೀನಾರಾಯಣರಾಯರು ತಮ್ಮ ಪೂರ್ವಜರಿಂದ ಬಂದ ಸಂಪೂರ್ಣ ಜಮೀನನ್ನು ಮನೆ ಸಮೇತ ಮಾರಿ ಕೈಗೆ ಬಂದ ಒಂದು ದೊಡ್ಡ ಮೊತ್ತದ ಹಣದೊಡನೆ ಶಿವಮೊಗ್ಗೆ ಸೇರಿದ್ದರಂತೆ. ಅವರು ಮುಂದೇನು ಮಾಡುವರೆಂಬ ವಿಷಯ ಯಾರಿಗೂ ತಿಳಿದಿರಲಿಲ್ಲ. ಆದರೆ ಅವರು ನನ್ನ ಅಣ್ಣನಿಗೆ ಕೊಡುವುದಾಗಿ ಹೇಳಿದ ಸ್ವಲ್ಪ ಜಮೀನಿನ ವಿಷಯ ಸುಳ್ಳಾಗಿ ಬಿಟ್ಟಿತ್ತು. ಅವರೊಡನೆ ಶಿವಮೊಗ್ಗೆ ಸೇರಿದ ಅಣ್ಣನ ಭವಿಷ್ಯ ಏನೆಂಬ ಪ್ರಶ್ನೆಗೆ ಸರಿಯಾದ ಉತ್ತರವಿರಲಿಲ್ಲ. ನಮಗೆಲ್ಲಾ ಹುರುಳಿಹಕ್ಕಲು ಮನೆತನದ ಬಗ್ಗೆ ತುಂಬಾ ಅಭಿಮಾನವಿತ್ತು. ಹಾಗೆಯೇ ಲಕ್ಷ್ಮೀನಾರಾಯಣರಾಯರ ಬಗ್ಗೆ ತುಂಬಾ ಗೌರವ ಇತ್ತು. ಆದ್ದರಿಂದ ಅವರು ಹೀಗೆ ನಮ್ಮೂರನ್ನೇ ತೊರೆದು ಶಿವಮೊಗ್ಗೆ ಸೇರಿದ್ದು ನಮಗೆಲ್ಲ ಜೀರ್ಣಿಸಿಕೊಳ್ಳಬಲ್ಲ ಸಮಾಚಾರವಾಗಿರಲಿಲ್ಲ. ಮುಂದೆ ಸಂಸಾರದ ವಿಷಯ ಏನಾಯಿತೆಂಬ ಬಗ್ಗೆ ನಾನು ಹುರುಳಿಹಕ್ಕಲಿನ ಗತವೈಭವ ಎಂಬ ಲೇಖನದಲ್ಲಿ ವಿವರವಾಗಿ ಬರೆದಿದ್ದೇನೆ.

ನಮಗೆ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಸ್ಟೆಲಿನಲ್ಲಿ ಸ್ಪೆಷಲ್ ಟ್ಯೂಷನ್
ಆ ವರ್ಷ ನಮ್ಮ ಹಾಸ್ಟೆಲಿನ ಆಡಳಿತ ವರ್ಗ ನಮಗೆ ಪಬ್ಲಿಕ್ ಪರೀಕ್ಷೆಗೆ ತಯಾರು ಮಾಡಲು ಕೆಲವು ಉತ್ತಮ ಮೇಷ್ಟ್ರುಗಳಿಂದ ಟ್ಯೂಷನ್ ಏರ್ಪಾಟು ಮಾಡಿತು. ಮುಖ್ಯವಾಗಿ ನಮಗೆ ಡಿವಿಎಸ್ ಹೈಸ್ಕೂಲ್ ಮೇಷ್ಟ್ರುಗಳಾದ ಸಿವಿ ಕೇಶವಮೂರ್ತಿಯವರಿಂದ (CVK) ಫಿಸಿಕ್ಸ್ ಮತ್ತು ಕೆಮಿಸ್ಟ್ರಿ ಸುಬ್ಜೆಕ್ಟ್ಸ್ ಮತ್ತು ವಿ ದೇವೇಂದ್ರ (VDR) ಅವರಿಂದ ಇಂಗ್ಲಿಷ್ ಪಾಠಗಳನ್ನು ಮಾಡಿಸಲಾಯಿತು. ಈ ಇಬ್ಬರೂ ತುಂಬಾ ಪ್ರಸಿದ್ಧರಾದ ಮೇಷ್ಟ್ರುಗಳಾಗಿದ್ದರು ಮತ್ತು ನಮಗೆ ಅವರ ಟ್ಯೂಷನ್ ತುಂಬಾ ಉಪಯುಕ್ತವಾಯಿತು. ಹಾಗೆಯೇ ಪಿಯುಸಿ ಮತ್ತು ಡಿಗ್ರಿ ತರಗತಿಗಳಿಗೆ ಸಹ್ಯಾದ್ರಿ ಕಾಲೇಜಿನ ಕೆಲವು ಲೆಕ್ಚರರ್ ಗಳಿಂದ ಮತ್ತು ನಮ್ಮ ಶಾಲೆಯ ಪ್ರಸಿದ್ಧ ಮೇಷ್ಟ್ರು ಎಸ್ ಸೂರ್ಯನಾರಾಯಣರಾಯರಿಂದ (SSR) ಟ್ಯೂಷನ್ ಹೇಳಿಸಲಾಯಿತು. ಆಮೇಲೆ ಒಂದು ಕಾರ್ಯಕ್ರಮ ಏರ್ಪಡಿಸಿ ಟ್ಯೂಷನ್ ಹೇಳಿದವರಿಗೆಲ್ಲಾ ಒಂದೊಂದು ಲಕೋಟೆಯ ಮೂಲಕ ಗೌರವ ಧನ  ಕೊಡಲಾಯಿತು. ಆದರೆ ಎಲ್ಲಾ ಮೇಷ್ಟ್ರುಗಳು ಮತ್ತು ಲೆಕ್ಚರರ್ ಗಳು ಆ ಲಕೋಟೆಗಳನ್ನು ತೆರೆದೂ ಕೂಡ ನೋಡದೆ ಅದರಲ್ಲಿದ್ದ  ಹಣವನ್ನು ಹಾಸ್ಟೆಲಿಗೆ ಕೊಡುಗೆಯಾಗಿ ನೀಡಿ ಬಿಟ್ಟರು!

ಹಾಸ್ಟೆಲಿನ ವಾರ್ಷಿಕೋತ್ಸವ
ನಮ್ಮ ಹಾಸ್ಟೆಲಿನ ಆ ವರ್ಷದ ವಾರ್ಷಿಕೋತ್ಸವ ತುಂಬಾ ವಿಜೃಂಭಣೆಯಿಂದ ನಡೆಯಿತು. ಕನ್ನಡನಾಡಿನ ಸುಪ್ರಸಿದ್ಧ ಕವಿ ದತ್ತಾತ್ರೇಯ ಬೇಂದ್ರೆಯವರು, ಆ ವರ್ಷವೇ ಸ್ಥಾಪಿಸಲ್ಪಟ್ಟ ಸಾಗರದ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನ ಪ್ರಿನ್ಸಿಪಾಲ್ ಗೋಪಾಲಕೃಷ್ಣ ಅಡಿಗರು, ಪ್ರೊಫೆಸರ್ ಬಿ ಹೆಚ್ ಶ್ರೀಧರ್ ಮತ್ತು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದ ವರದೇಶಿಕಾಚಾರ್ ಅವರ ಭಾಷಣಗಳನ್ನು ಕೇಳುವ ಅವಕಾಶ ನಮ್ಮದಾಯಿತು.

ನನಗೆ ಪುನಃ ಸಂಸ್ಕೃತ ಸ್ಕಾಲರ್ಷಿಪ್
ನನಗೆ ಹಿಂದಿನ ವರ್ಷ ನೀಡಲಾಗಿದ್ದ ಸಂಸ್ಕೃತ ಸ್ಕಾಲರ್ಷಿಪ್ ಆ ವರ್ಷವೂ ಮಂಜೂರಾಯಿತು. ನಾನು ಪುನಃ ನನ್ನ " ಚಿಕ್ಕಪ್ಪ” ರಮೇಶ ರಾಮಚಂದ್ರ ಕಂಚಿಯನ್ನು ಶಾಲೆಗೆ ಕರೆದುಕೊಂಡು ಹೋಗಿ ಒಂದು ನೂರು ರೂಪಾಯಿ ದೊರೆತುದಕ್ಕೆ ಸಹಿ ಮಾಡಿಸಿ ಹಣವನ್ನು ತೆಗೆದುಕೊಂಡೆ.
------- ಮುಂದುವರಿಯುವುದು-----