ಅಧ್ಯಾಯ ೩೦
ಸೋಮವಾರ ಮುಂಜಾನೆ ನನ್ನನ್ನು ಎಬ್ಬಿಸಿದ
ಗೌರಕ್ಕ ನಾನು ಮುಖ ತೊಳೆದ ಸ್ವಲ್ಪ ಹೊತ್ತಿಗೇ ಕಾಫಿ ತಿಂಡಿಗೆ ಕರೆದಳು. ಆಮೇಲೆ ನಾನು ಸ್ನಾನ ಇತ್ಯಾದಿಗಳನ್ನು
ಮುಗಿಸಿ ೯ ಗಂಟೆಗೆ ಶಾಲೆಗೆ ಹೊರಡಲು ರೆಡಿಯಾಗುತ್ತಿದ್ದಂತೆ ನನಗೆ ಇನ್ನೊಂದು ಸಣ್ಣ ಫಲಾಹಾರಕ್ಕೆ ಕರೆ
ಬಂತು. ಅಣ್ಣನಿಗೆ ನಮ್ಮ ಮನೆಯವರ ಬೆಳಗಿನ ತಿಂಡಿಯ ಹುಚ್ಚು ತಿಳಿದಿದ್ದರಿಂದ ನನಗೆ ಎರಡು ಬಾರಿ ತಿಂಡಿ
ಕೊಡುವಂತೆ ಅಕ್ಕನಿಗೆ ಹೇಳಿದ್ದನಂತೆ! ಅವನಿಗೆ ಶಾಲೆಯಲ್ಲಿ ಕೊಡುತ್ತಿದ್ದ ಕ್ಯಾಂಟೀನ್ ತಿಂಡಿಯ ಬಗ್ಗೆ
ಯಾವುದೇ ಭರವಸೆ ಇರಲಿಲ್ಲ. ಆದ್ದರಿಂದ ನಾನು ಶಾಲೆಯಿಂದ ಹಿಂದಿರುಗಿದ ಮೇಲೆ ಮದ್ಯಾಹ್ನ ಮತ್ತು ರಾತ್ರಿ
ಊಟಗಳನ್ನು ಒಂದೇ ಕಂತಿನಲ್ಲಿ ಸುಮಾರು ಐದು ಗಂಟೆಯ ವೇಳೆಗೆ ಮಾಡಬೇಕಿತ್ತು! ನಾನು ಬೇಗನೆ ಈ ವ್ಯವಸ್ಥೆಗೆ ಹೊಂದಿಕೊಂಡೆ.
ನಾನು ವಿಷ್ಣು ಇಬ್ಬರೂ ಒಟ್ಟಿಗೆ ಹೊರಟು
ಆಗ ಹೊಸದಾಗಿ ಕಟ್ಟಿದ್ದ ಮಂಜಪ್ಪಯ್ಯನವರ ಮನೆಯ ಪಕ್ಕದಲ್ಲಿ ಒಂದು ಸಣ್ಣ ಕಾಡಿನ ಕಾಲುಹಾದಿಯಲ್ಲಿ ಮುಂದೆ
ಹೋದೆವು. ಅದಕ್ಕೆ ಬೊಮ್ಮಕ್ಕನ ಓಣಿ ಎಂದು ಹೆಸರು. ಅಲ್ಲಿನ ಇಳಿಜಾರಿನಲ್ಲಿ ಒಂದು ಸಣ್ಣ ಹಳ್ಳ ಹರಿಯುತ್ತಿತ್ತು.
ಆ ಹಳ್ಳವೇ ಮುಂದೆ ಹರಿದು ಹೊಕ್ಕಳಿಕೆಯ ತೋಟಗಳಿಗೆ ನೀರು ಒದಗಿಸುತ್ತಿತ್ತು. ಅದನ್ನು ದಾಟಿ ಮೇಲ್ಕೊಪ್ಪ
ಎಂಬಲ್ಲಿ ರಸ್ತೆ ಸೇರಿದೆವು. ಅಲ್ಲಿ ಪುಟ್ಟಪ್ಪ (ವಾಸಪ್ಪ ನಾಯಕರ ಮಗ), ಮಂಜುನಾಥ (ಮುದ್ದಣ್ಣಯ್ಯನವರ
ಮಗ) ಮತ್ತು ವೆಂಕಟಯ್ಯ (ಕೋಣೆಗದ್ದೆ) ಎಂಬ ಹುಡುಗರು
ಜೊತೆಯಾದರು. ಮುಂದೆ ಕವಡೆಕಟ್ಟೆ ಎಂಬಲ್ಲಿ ಲಕ್ಷ್ಮೀನಾರಾಯಣ (ಚಾರಣ ಬೈಲ್) ಎಂಬ ಹುಡುಗನೊಡನೆ ಸೇರಿ
ಕೊಳಾವರ ದೇವಸ್ಥಾನ ತಲುಪಿದೆವು. ಅಲ್ಲಿನ ಅರ್ಚಕರಾದ
ಅಚ್ಚುತ ಭಟ್ಟರ ಮಗ ಶಿವರಾಮ ನಮ್ಮೊಡನೆ ಸೇರಿದ.
ಸ್ವಲ್ಪ ಮುಂದೆ ಒಂದು ಹಳ್ಳದ ಸೇತುವೆಯನ್ನು
ದಾಟಿ ನಾವು ಅತ್ತಿಕೊಡಿಗೆಯೆಂಬಲ್ಲಿ ಚಿಕ್ಕಮಗಳೂರು ಜಿಲ್ಲೆಯ ಗಡಿ ದಾಟಿ ಶಿವಮೊಗ್ಗ ಜಿಲ್ಲೆಯೊಳಗೆ
ಪ್ರವೇಶಿಸಿದೆವು. ಅಲ್ಲಿ ಪುಟ್ಟಪ್ಪ (ಚೂಡೇಗೌಡರ ಮಗ)
ಮತ್ತು ಶಂಕ್ರಪ್ಪ ಎಂಬ ಹುಡುಗರು ಜೊತೆಯಾದರು. ಅತ್ತಿಕೊಡಿಗೆ ಮನೆಯ ಬಲಭಾಗದಲ್ಲಿ ವಾಸಪ್ಪ ನಾಯಕರ ತಮ್ಮ
ಲಿಂಗಪ್ಪ ನಾಯಕರ ಮನೆಯನ್ನು ಹೊಸದಾಗಿ ಕಟ್ಟಲಾಗಿತ್ತು. ಅವರಿಗೆ ರಾಮ ಮತ್ತು ಲಕ್ಷ್ಮಣ ಎಂಬ ಅವಳಿ ಜವಳಿ
ಮಕ್ಕಳಿದ್ದರು. ಅಲ್ಲಿಂದ ಮುಂದೆ ಬಸವಾನಿಯವರೆಗೂ ಟಾರ್ ರಸ್ತೆ ಇತ್ತು. ಬಸವಾನಿಗೆ ಬಂದ ಬಸ್ಸುಗಳು ಅಲ್ಲಿಯವರೆಗೂ ಬರುತ್ತಿದ್ದವು.
ಸ್ವಲ್ಪ ದೂರ ಮುಂದೆ ಒಂದು ದೇವಸ್ಥಾನವಿತ್ತು. ಅದರ ಹಿಂದೆ ಗಣಪೇಗೌಡರ ಮನೆಯಿಂದ ತಿಮ್ಮಪ್ಪ ಮತ್ತು
ಗೋಪಾಲ ಎಂಬ ಹುಡುಗರು ನಮ್ಮೊಡನೆ ಸೇರಿದರು. ಮುಂದೆ ಸ್ವಲ್ಪ ದೂರದಲ್ಲಿ ಬಲಭಾಗದಲ್ಲಿ ಕೊಳಾವರ ತಿಮ್ಮಣ್ಣ
ಗೌಡರ ವಿಶಾಲವಾದ ಬಂಗಲೆ ಇತ್ತು. ತಿಮ್ಮೇಗೌಡರ ಕುಟುಂಬ ತುಂಬಾ ಶ್ರೀಮಂತ, ವಿದ್ಯಾವಂತ ಮತ್ತು ಪ್ರಸಿದ್ಧ
ಕುಟುಂಬ. ಅವರ ಮಗ ವೆಂಕಟಯ್ಯನವರು ಮುಂದೆ ತೀರ್ಥಹಳ್ಳಿ ತಾಲೂಕ್ ಬೋರ್ಡ್ ಪ್ರೆಸಿಡೆಂಟ್ ಆಗಿ ತುಂಬಾ
ಜನೋಪಕಾರಿ ಕೆಲಸಗಳನ್ನು ಮಾಡಿದರು.
ಮುಂದೆ ನೇಣಾಂಗಿ ಎಂಬ ಊರಿನ ಮಹಾದೇವ ಭಟ್ಟರ ಮಗಳು ವಿಶಾಲಾಕ್ಷಿ
ಎಂಬ ಹುಡುಗಿಯೂ ನಮ್ಮೊಡನೆ ೮ನೇ ತರಗತಿಯಲ್ಲಿ ಓದಲು ಬರುತ್ತಿದ್ದಳು. ಅಲ್ಲೊಂದು ದೊಡ್ಡ ಹಳ್ಳದ ಮೇಲಿನ
ಸೇತುವೆ ದಾಟಿ ಒಂದು ಗುಡ್ಡವನ್ನೇರಿದ ನಂತರ ನಾವು ಬಸವಾನಿ ತಲುಪಿದೆವು. ಊರಿನ ಒಂದು ದೊಡ್ಡ ಕೆರೆಯ
ದಂಡೆಯ ಮತ್ತೊಂದು ಬದಿಗೆ ನಮ್ಮ ಶಾಲೆ ಇತ್ತು.
ಬಸವಾನಿ ಊರು ತುಂಗಾನದಿಯ ತೀರದಲ್ಲಿತ್ತು.
ಇಲ್ಲಿ ಪ್ರಸಿದ್ಧ ಸೋಮೇಶ್ವರ ದೇವಸ್ಥಾನವಿದ್ದು ಪ್ರತಿ
ವರ್ಷವೂ ಜಾತ್ರೆ ನಡೆಯುತ್ತಿತ್ತು. ಊರಿನ ಮಧ್ಯೆ ಒಂದು ದೊಡ್ಡ ರೈಸ್ ಮಿಲ್ ಇತ್ತು. ಸುಬ್ಬಾ ಭಟ್ಟರೆಂಬ
ಶ್ರೀಮಂತರು ಅದರ ಒಡೆಯರಾಗಿದ್ದು ಅವರ ಸುಂದರ ಬಂಗಲೆ ಊರಿನ ಮಧ್ಯದಲ್ಲಿ ಮೆರೆಯುತ್ತಿತ್ತು. ಬಂಗಲೆಯ
ಮುಂದಿದ್ದ ಹೂತೋಟದ ಸೊಬಗು ವರ್ಣಿಸಲಸದಳ. ಸುಬ್ಬಾ ಭಟ್ಟರ ಹಿರಿಯ ಮಗ ಚಿದಂಬರ ನಮ್ಮ ಶಾಲೆಯಲ್ಲಿ ೮ನೇ
ತರಗತಿ ಓದುತ್ತಿದ್ದ. ನಮ್ಮ ಶಾಲೆಯ ಹತ್ತಿರವೇ ಪ್ರಸಿದ್ಧ ಸ್ವಾತಂತ್ರ ಹೋರಾಟಗಾರ ಮತ್ತು ರಾಜಕೀಯ ಪ್ರವೀಣ
ಬಸವಾನಿ ರಾಮಶರ್ಮರ ಬಂಗಲೆ ಇತ್ತು. ಅವರ ಪತ್ನಿ ಸಾವಿತ್ರಮ್ಮ ಹಿರಿಯ ಸಮಾಜ ಸೇವಕಿಯಾಗಿದ್ದರು. ದಂಪತಿಗಳಿಗೆ
ಮಕ್ಕಳಿರಲಿಲ್ಲ.
ನನ್ನ ಶಾಲೆಯ ಮೊದಲ ದಿನ ಮೇಷ್ಟರ ಮತ್ತು
ಸಹಪಾಠಿಗಳ ಪರಿಚಯ ಮಾಡಿಕೊಳ್ಳುವುದರಲ್ಲಿ ಮುಕ್ತಾಯವಾಯಿತು. ನನಗೆ ನಮ್ಮ ತರಗತಿಯಲ್ಲಿ ಯಾರು ಪ್ರಥಮ
ವಿದ್ಯಾರ್ಥಿ ಎಂದು ತಿಳಿದುಕೊಳ್ಳುವುದು ಮುಖ್ಯವಾಗಿತ್ತು. ಏಕಂದರೆ ಅಣ್ಣ ನನಗೆ ಒಂದು ವಿಷಯ ಸ್ಪಷ್ಟ
ಮಾಡಿಬಿಟ್ಟಿದ್ದ. ನಾನು ಯಾವಾಗಲೂ ತರಗತಿಗೆ ಪ್ರಥಮನಾಗಿ ಇರಬೇಕೆಂದು. ಅವನಿಗೇನೋ ನನ್ನ ಅರ್ಹತೆಯ ಬಗ್ಗೆ
ಅಷ್ಟೊಂದು ವಿಶ್ವಾಸವಿದ್ದರೂ ನನಗೆ ಮುಂದೆ ಅದೊಂದು ದೊಡ್ಡ ಹೊರೆಯಾಗಲಿತ್ತು. ಜಗದೀಶ ಎಂಬ ಹುಡುಗ ಮೊದಲನೇ
ಸ್ಥಾನ ಮತ್ತು ಶ್ರೀಧರ ಮೂರ್ತಿ ಎಂಬ ಹುಡುಗ ಎರಡನೇ ಸ್ಥಾನದಲ್ಲಿದ್ದರೆಂದು ತಿಳಿಯಿತು. ಜಗದೀಶ ಲಕ್ಷ್ಮೀಪುರ
ಎಂಬ ಊರಿನ ತಿಮ್ಮೇ ಗೌಡರ ಮಗ. (ಈಚೆಗೆ ಒಬ್ಬರಿಂದ ಅವನು ಕೊಪ್ಪ ತಾಲೂಕಿನ ತಹಸೀಲ್ದಾರ್ ಆಗಿ ನಿವೃತ್ತಿ
ಪಡೆದನೆಂದು ತಿಳಿಯಿತು. ಅವನ ಮೇಲಿನ ಅಪವಾದವೆಂದರೆ ತಾನು ಲಂಚ ಪಡೆಯದಿದ್ದುದು ಮಾತ್ರವಲ್ಲ, ಬೇರೆಯವರಿಗೂ
ಲಂಚ ಪಡೆಯದಂತೆ ಮಾಡಿ ಇಡೀ ತಾಲೂಕು ಕಚೇರಿಯವರನ್ನೆಲ್ಲಾ ಬಡವರನ್ನಾಗಿ ಮಾಡಿ ಬಿಟ್ಟನೆಂದು!). ಜಗದೀಶನ
ಚಿಕ್ಕಪ್ಪ ಕೃಷ್ಣೇಗೌಡರು ನಾವೆಂದೂ ಕೇಳಿರದ ಕಮ್ಯುನಿಸ್ಟ್ ಪಾರ್ಟಿ (ಮಾರ್ಕ್ಸಿಸ್ಟ್) ಲೀಡರ್ ಆಗಿದ್ದು ಬಸವಾನಿಯಲ್ಲಿ ಒಂದು ಆಫೀಸ್ ಕೂಡ ಹೊಂದಿದ್ದರು.
ಶ್ರೀಧರ ಮೂರ್ತಿ ಕಾಂಗ್ರೆಸ್ ನಾಯಕರೂ ಮತ್ತು ಮಲೆನಾಡು ಅಡಿಕೆ ಮಾರಾಟ ಸೊಸೈಟಿ ಬಸವಾನಿ ಶಾಖೆಯ ಮುಖ್ಯಸ್ಥರೂ
ಆಗಿದ್ದ ನಾರಾಯಣ ಭಟ್ಟರ ಮಗ. ಅವನೂ ಕೂಡ ನಮ್ಮ ವಿಷ್ಣುವಿನಂತೆ
ಜುಟ್ಟು ಬಿಟ್ಟಿದ್ದರೂ ಅದನ್ನು ತನ್ನ ತಂದೆಯವರಂತೆ ಗಾಂಧಿಟೋಪಿಯಿಂದ ಮುಚ್ಚಿಬಿಟ್ಟಿದ್ದ! ಇಡೀ ಶಾಲೆಗೆ ಅವನೊಬ್ಬನೇ ಗಾಂಧಿ ಟೋಪಿಧಾರಿಯಾಗಿದ್ದ.
ಮದ್ಯಾಹ್ನದ ವಿರಾಮದ ವೇಳೆಗೆ ಅಡಿಗರ
ಕ್ಯಾಂಟೀನ್ ನಲ್ಲಿ ತಯಾರಿಸಿದ ಉಪ್ಪಿಟ್ಟು ಮತ್ತು ಪೌಡರ್ ಹಾಲು ಹಂಚಲಾಯಿತು. ನನಗೆ ಅವೆರಡೂ ಗಂಟಲಲ್ಲಿ
ಇಳಿಯಲೇ ಇಲ್ಲ! ಹಾಗಾಗಿ ನಾನು ಎರಡನೇ ದಿನದಿಂದ ಅದಕ್ಕೆ ಚಕ್ಕರ್ ಹಾಕತೊಡಗಿದೆ. ಶಾಲೆಯ ಹಿಂದೆ ಆಟದ
ಮೈದಾನವಿದ್ದು ಅದರಲ್ಲಿ ಹುಡುಗರೆಲ್ಲ ಸೇರಿ ಕಬಡ್ಡಿ ಆಡುತ್ತಿದ್ದರು. ನನಗೆ ಮೊದಲಿನಿಂದಲೂ ಕಬಡ್ಡಿಯಲ್ಲಿ ವಿಪರೀತ ಆಸಕ್ತಿ ಇತ್ತು. ನಾನು
ಆಟದಲ್ಲಿ ಸೇರಿಕೊಂಡೆ. ಇಡೀ ಶಾಲೆಗೆ ಎತ್ತರದ ವಿದ್ಯಾರ್ಥಿಯಾಗಿದ್ದ ೮ನೇ ತರಗತಿಯ ವಾಸಾಚಾರಿ ಒಂದು ಟೀಮ್ ಕ್ಯಾಪ್ಟನ್ ಆಗಿದ್ದರೆ,
ಇನ್ನೊಂದು ಟೀಮ್ ಗೆ ೭ನೇ ತರಗತಿಯ ಅತ್ಯಂತ ಬಲಕಾಯ ವಿದ್ಯಾರ್ಥಿಯಾದ ಶಂಕರಪ್ಪ ಕ್ಯಾಪ್ಟನ್ ಆಗಿದ್ದ.
ಶಂಕರಪ್ಪ ಮತ್ತು ವಾಸಾಚಾರಿ ಇಬ್ಬರೂ
ಆಟದಲ್ಲಿ ತುಂಬಾ ಪ್ರವೀಣರಾಗಿದ್ದರು. ಗುಂಡು ಗುಂಡಾಗಿದ್ದ ಶಂಕರಪ್ಪನನ್ನು ಹಿಡಿಯುವುದು ಅಸಾಧ್ಯವಾಗಿದ್ದರೆ,
ಆಕಾಶದೆತ್ತರದ ವಾಸಾಚಾರಿ ಯಾರ ಕೈಗೂ ಸಿಲುಕದ ಗಿರಾಕಿಯಾಗಿದ್ದ. ನಾನು ಕೂಡಾ ಕಬಡ್ಡಿ ಆಟದ ಕೆಲವಂಶಗಳನ್ನು ಮನದಟ್ಟು ಮಾಡಿಕೊಂಡಿದ್ದೆ:
1.
ತುಂಬಾ ಹೊತ್ತು ಉಸಿರನ್ನು ಹಿಡಿದುಕೊಳ್ಳುವಿಕೆ
2.
ಯಾರಾದರೂ ಹಿಡಿದುಕೊಂಡಾಗ ನುಸುಳಿ ಹೋಗುವ ಚಾಕಚಕ್ಯತೆ ಮತ್ತು
3.
ಆಟಗಾರನ ಕಾಲು ಗಟ್ಟಿಯಾಗಿ ಹಿಡಿದು ಅಂಟಿಕೊಂಡು ಬಿಡುವುದು
ನನ್ನ ದೇಹ ಶಕ್ತಿ ಕಡಿಮೆ ಇದ್ದರೂ ಕೂಡಾ
ಮೇಲಿನ ವಿಷಯಗಳಲ್ಲಿ ಪ್ರವೀಣತೆ ಗಳಿಸಿ ಬೇಗನೆ ಕಬಡ್ಡಿ ಟೀಮ್ ನಲ್ಲಿ ಒಂದು ಉತ್ತಮ ಸ್ಥಾನ ಗಳಿಸಿಕೊಂಡೆ.
ವಿಷ್ಣು ಉತ್ತಮ ದೇಹ ಶಕ್ತಿ ಹೊಂದಿದ್ದರೂ ಅವನಿಗೆ ಆಟಗಳಲ್ಲಿ ಯಾವುದೇ ಆಸಕ್ತಿ ಇರಲಿಲ್ಲ. ಶಾಲೆಯ ಜವಾನ
ನಾಗಪ್ಪ ಘಂಟೆ ಬಾರಿಸುತ್ತಿದ್ದಂತೆ ನಾವು ಆಟವನ್ನು ನಿಲ್ಲಿಸಿ ಕೆರೆಯಲ್ಲಿ ಕೈ ಕಾಲು ತೊಳೆದು ಶಾಲೆಗೆ ಧಾವಿಸಬೇಕಿತ್ತು.
ನಮ್ಮ ತರಗತಿಯಲ್ಲಿ ೬-೭ ಮಂದಿ ಹುಡುಗಿಯರಿದ್ದರು.
ಆದರೆ ನಮಗೆಲ್ಲ ನಾಚಿಕೆ ಜಾಸ್ತಿಯಿದ್ದರಿಂದ ಹುಡುಗಿರೊಡನೆ ಹೆಚ್ಚು ಮಾತನಾಡುತ್ತಿರಲಿಲ್ಲ. ಶಾಲೆಯ ೫ನೇ ಮತ್ತು ೬ನೇ ತರಗತಿಗಳು ಪ್ರತ್ಯೇಕ ಕೋಣೆಗಳಲ್ಲಿ ನಡೆಯುತ್ತಿದ್ದವು. ಆದರೆ ೭ ನೇ ಮತ್ತು ೮ನೇ ತರಗತಿಗಳು
ಒಂದೇ ಕೊಠಡಿಯಲ್ಲಿ ನಡೆಯುತ್ತಿದ್ದವು. ನಾಗಪ್ಪನ ಕೊನೆಯ ಘಂಟೆ ಬಾರಿಸುತ್ತಿದ್ದಂತೆ ನಾವೆಲ್ಲರೂ ಒಟ್ಟಿಗೆ
ಶಾಲೆಯಿಂದ ಹೊರಟು ಮೇಲ್ಕೊಪ್ಪ ತಲುಪುವಾಗ ನಾನು ಮತ್ತು ವಿಷ್ಣು ಮಾತ್ರ ಉಳಿದು ಹೊಕ್ಕಳಿಕೆ ತಲುಪುತ್ತಿದ್ದೆವು.
-----ಮುಂದುವರೆಯುವುದು-----