ನಮ್ಮ ಕಾಲದ ಪಠ್ಯಪುಸ್ತಕಗಳು
ಅಧ್ಯಾಯ ೮
ಕಂತಿ ಮತ್ತು ಹಂಪನ ಕಥೆ
ನಾನು ಈ ಮೊದಲೇ ಬರೆದಂತೆ ಕನ್ನಡದ ಕೆಲವೇ ಕವಯಿತ್ರಿಗಳಲ್ಲಿ ಒಬ್ಬಳಾದ ಕಂತಿ ಎಂಬುವವಳ ಕಥೆ ತುಂಬಾ ಕುತೂಹಲಕಾರಿಯಾಗಿದೆ. ನಮ್ಮ ೮ನೇ ತರಗತಿಯ ಕನ್ನಡದ ಪಠ್ಯಪುಸ್ತಕದಲ್ಲಿದ್ದ ಕಂತಿ ಮತ್ತು ಹಂಪ ಜೋಡಿಯ ಕಥೆ ತುಂಬಾ ಸ್ವಾರಸ್ಯಕರವೂ ಆಗಿತ್ತು. ಈ ಜೋಡಿಯು ೧೩ನೇ ಶತಮಾನದಲ್ಲಿ ದ್ವಾರಸಮುದ್ರದ (ಇಂದಿನ ಹಳೆಯಬೀಡು) ಹೊಯ್ಸಳ ದೊರೆ ವೀರ ಬಲ್ಲಾಳನ ಆಸ್ಥಾನದಲ್ಲಿತ್ತು.
ದುರದೃಷ್ಟವೆಂದರೆ
ಕಂತಿ ಬರೆದಳೆನ್ನಲಾದ ಯಾವುದೇ ಕವನಗಳು ಲಭ್ಯವಾಗಿಲ್ಲ. ಆದರೆ ಈ ಜೋಡಿಯ ಕಥೆಯಲ್ಲಿ ಬರುವ ಹಂಪನು, ಕಂತಿಗೆ ಒಡ್ಡಿದ ಒಗಟುಗಳು ಮತ್ತು ಅವುಗಳಿಗೆ ಅತಿ ಜಾಣ್ಮೆಯಿಂದ ಕಂತಿ ನೀಡಿದ ಉತ್ತರಗಳು, ಅವಳ ಕಾವ್ಯ ಪರಿಣತೆಯ ಸಾಕ್ಷಿಯಾಗಿವೆ. ಇಷ್ಟೊಂದು ವರ್ಷಗಳ ನಂತರವೂ ನನ್ನ ನೆನಪಿಗೆ ಬರುವ ಈ ಜೋಡಿಯ ಕಥೆ ಕೆಳಕಂಡಂತಿದೆ:
ಹಂಪನ ಮೂಲ ಹೆಸರು ನಾಗಚಂದ್ರ. ವೀರ
ಬಲ್ಲಾಳನ ಆಸ್ಥಾನದಲ್ಲಿ ಅವನೊಬ್ಬ ಪ್ರಖ್ಯಾತ ಕವಿ ಮತ್ತು ಗುರುವಾಗಿದ್ದ. ಅವನನ್ನು ಅಭಿನವ ಪಂಪ ಎಂದು
ಕೂಡ ಕರೆಯಲಾಗುತ್ತಿದ್ದು ಅವನು ರಾಮಚಂದ್ರ ಚರಿತ ಪುರಾಣವನ್ನು ಬರೆದಿದ್ದ. ನಾಗಚಂದ್ರನ ಗುರುಕುಲದಲ್ಲಿ
ತುಂಬಾ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ಆದರೆ ಅವರಲ್ಲಿ ಕೆಲವರು ನಿರೀಕ್ಷಿತ ಮಟ್ಟದ ಅಭ್ಯಾಸ
ಮಾಡಲು ಕಷ್ಟಪಡುತ್ತಿರುವುದು ನಾಗಚಂದ್ರನ ಗಮನಕ್ಕೆ ಬಂತು. ಅವರ ತಿಳುವಳಿಕೆಯ ಮಟ್ಟವನ್ನು ಸುಧಾರಿಸಲು
ನಾಗಚಂದ್ರನು ಜ್ಯೋತಿಷ್ಮತಿ ತೈಲ ಎಂಬ ಕಷಾಯವನ್ನು ತಯಾರಿಸಿದ. ಆ ತೈಲ ಎಷ್ಟು ಶಕ್ತಿಯುತವಾಗಿತ್ತೆಂದರೆ,
ಅದರ ಒಂದೆರಡು ಹನಿಗಳನ್ನು ಕುಡಿದೊಡನೆ ವಿದ್ಯಾರ್ಥಿಗಳ ತಿಳುವಳಿಕೆಯ ಮಟ್ಟ ಒಮ್ಮೆಗೇ ಸುಧಾರಿಸುತ್ತಿತ್ತು.
ಕಂತಿ ಗುರುಕುಲದಲ್ಲಿ ಒಬ್ಬ
ಸೇವಕಿಯಾಗಿದ್ದಳು. ತುಂಬಾ ಬುದ್ಧಿವಂತೆ ಮತ್ತು ಪ್ರತಿಭಾವಂತೆಯಾಗಿದ್ದ
ಆಕೆ ನಾಗಚಂದ್ರನು ಶಿಷ್ಯರಿಗೆ ಬೋಧನೆ ಮಾಡುವಾಗ ಮರೆಯಲ್ಲಿ ನಿಂತು ಗಮನವಿಟ್ಟು ಕೇಳುತ್ತಿರುತ್ತಾಳೆ.
ಗುರುವಿನ ಪಾಠಗಳನ್ನೆಲ್ಲಾ ಚೆನ್ನಾಗಿ ಕೇಳಿ ಅರಿತುಕೊಂಡ ಆಕೆ ತನ್ನನ್ನೂ ಒಬ್ಬ ಶಿಷ್ಯೆಯಾಗಿ ಸ್ವೀಕರಿಸುವಂತೆ
ನಾಗಚಂದ್ರನನ್ನು ಕೇಳಿಕೊಳ್ಳುತ್ತಾಳೆ. ಆದರೆ ನಾಗಚಂದ್ರನಿಗೆ ಅವಳಿಗೆ ತನ್ನ ಬೋಧನೆಗಳು ಅರ್ಥವಾಗುವುದೆಂದು
ಅನಿಸುವುದಿಲ್ಲ. ಅಂತೆಯೇ ಅವನು ಅವಳ ಕೋರಿಕೆಯನ್ನು ನಿರಾಕರಿಸುತ್ತಾನೆ.
ಕಂತಿಗೆ ನಾಗಚಂದ್ರನು ಜ್ಯೋತಿಷ್ಮತಿ
ತೈಲವನ್ನು ಕುಡಿಸಿ ತನ್ನ ಶಿಷ್ಯರನ್ನು ಬುದ್ಧಿವಂತರನ್ನಾಗಿ ಮಾಡುತ್ತಿರುವ ರಹಸ್ಯದ ಅರಿವಾಗಿರುತ್ತದೆ.
ಹಾಗೆಯೇ ಅವನು ಕೇವಲ ಒಂದು ಹನಿಯಷ್ಟು ತೈಲವನ್ನು ಕುಡಿಸಿ ಅವರ ತಿಳುವಳಿಕೆಯನ್ನು ಸುಧಾರಿಸುವುದೂ ಗೊತ್ತಿರುತ್ತದೆ.
ಆದ್ದರಿಂದ ತಾನೂ ಕೂಡ ಅದನ್ನು ಸೇವಿಸಿ ಬುದ್ಧಿವಂತಳಾಗಬೇಕೆಂದು ಬಯಸುತ್ತಾಳೆ. ಗುರುವು ಆ ತೈಲದ ಪಾತ್ರೆಯನ್ನು
ಪೂಜಾ ಕೊಠಡಿಯಲ್ಲಿ ಇಟ್ಟಿರುವುದೂ ಅವಳಿಗೆ ಗೊತ್ತಿರುತ್ತದೆ. ಒಂದು ದಿನ ಗುರುವು ಮನೆಯಲ್ಲಿಲ್ಲದ ಸಮಯ
ನೋಡಿ ಆಕೆ ತೈಲ ಪಾತ್ರೆಯನ್ನೆತ್ತಿಕೊಂಡು ಹೊರಗೆ ಓಡಿಹೋಗುತ್ತಾಳೆ.
ಪಾತ್ರೆಯಲ್ಲಿದ್ದ ತೈಲದ ಒಂದು ಹನಿಯನ್ನು
ಕಂತಿ ಸೇವಿಸುತ್ತಾಳೆ. ಆಗ ಇದ್ದಕ್ಕಿದ್ದಂತೇ ಅವಳಿಗೊಂದು ಅದ್ಭುತ ಐಡಿಯಾ ಹೊಳೆಯುತ್ತದೆ. ನಾಗಚಂದ್ರನ
ಶಿಷ್ಯರಲ್ಲೇ ತಾನು ಅತ್ಯಂತ ಬುದ್ಧಿವಂತಳಾಗಿಬಿಡಬೇಕೆಂದು! ಮರುಯೋಚನೆ ಮಾಡದೇ ಆಕೆ ಒಮ್ಮೆಗೇ ಪಾತ್ರೆಯಲ್ಲಿದ್ದ
ತೈಲವನ್ನೆಲ್ಲಾ ತನ್ನ ಬಾಯಿಯೊಳಗೆ ಸುರಿದುಕೊಂಡು ಗಟಗಟನೆ ಕುಡಿದುಬಿಡುತ್ತಾಳೆ!
ಪಾಪ. ಆ ಬಡಪಾಯಿ ಹುಡುಗಿಯ ಗಂಟಲು ಮತ್ತು ಹೊಟ್ಟೆ ಆ ಪ್ರಬಲ
ಕಷಾಯವಷ್ಟನ್ನೂ ಒಮ್ಮೆಗೇ ನುಂಗಿದ ಪರಿಣಾಮವಾಗಿ ಅತೀವವಾಗಿ ಉರಿಯತೊಡಗುತ್ತದೆ. ಉರಿಯನ್ನು ಸಹಿಸಲಾರದೇ
ಅವಳು ಹತ್ತಿರವೇ ಇದ್ದ ಬಾವಿಯೊಂದರೊಳಗೆ ಹಾರಿಬಿಡುತ್ತಾಳೆ. ಅದೃಷ್ಟವಶಾತ್ ಬಾವಿಯಲ್ಲಿ ಹೆಚ್ಚು ನೀರಿಲ್ಲದ
ಕಾರಣ ಅವಳು ಸೊಂಟದವರೆಗೆ ಮಾತ್ರ ಮುಳುಗುತ್ತಾಳೆ.
ಓಹ್! ಜ್ಯೋತಿಷ್ಮತಿ ತೈಲ ಅಷ್ಟರಲ್ಲೇ ಅವಳ ಬುದ್ಧಿಯ ಮೇಲೆ ತನ್ನ ಪ್ರಭಾವವನ್ನು ಬೀರಿರುತ್ತದೆ.
ಅವಳನ್ನು ಬಾವಿಯಿಂದ ಮೇಲೆತ್ತಲು ಬಂದ ಜನಗಳಿಗೆ ಅವಳು ಬಾವಿಯೊಳಗೆ ನಿಂತೇ ಹೊಸ ಹೊಸ ಕವನಗಳನ್ನು ಕಟ್ಟಿ
ಹಾಡುತ್ತಿರುವ ದೃಶ್ಯ ಆಶ್ಚರ್ಯವನ್ನು ತರುತ್ತದೆ. ಸಮಾಚಾರ ತಿಳಿದು ಓಡುತ್ತಾ ಬಂದ ನಾಗಚಂದ್ರನಿಗೆ
ಕಂತಿ ಬಾವಿಯೊಳಗೆ ನಿಂತೇ ಒಂದಾದ ಮೇಲೊಂದು ಅತ್ಯಂತ ವಿಶಿಷ್ಟವಾದ ಕವನಗಳನ್ನು ರಚಿಸಿ ಹಾಡುತ್ತಿರುವುದನ್ನು
ಗಮನಿಸಿ ತನ್ನ ಕಣ್ಣುಗಳನ್ನೇ ನಂಬಲಾಗುವುದಿಲ್ಲ.
ನಾಗಚಂದ್ರನು ಕೂಡಲೇ ಕಂತಿಯನ್ನು ಬಾವಿಯಿಂದ ಹೊರತೆಗೆಸಿ ತನ್ನ
ಶಿಷ್ಯೆಯಾಗಿ ಸ್ವೀಕರಿಸುತ್ತಾನೆ. ಜ್ಯೋತಿಷ್ಮತಿ ತೈಲದ ಪರಿಣಾಮದಿಂದ ಆಕೆ ಬಹುಬೇಗನೆ ಕವನ ಮತ್ತು ಕಾವ್ಯಗಳ
ರಚನೆಯ ಮರ್ಮವನ್ನು ತನ್ನ ಗುರುವಿನಿಂದ ಕಲಿತುಬಿಡುತ್ತಾಳೆ. ಅವಳ ಪರಿಣತೆ ಯಾವ ಮಟ್ಟಕ್ಕೆ ಬೆಳೆಯಿತೆಂದರೆ,
ಆಕೆ ಗುರುವಿನ ರಚನೆಗಳನ್ನೇ ಟೀಕಿಸತೊಡಗುತ್ತಾಳೆ!
ಸ್ವಲ್ಪ ಕಾಲದಲ್ಲೇ ಕಂತಿಯ ಪಾಂಡಿತ್ಯ ಯಾವ ಮಟ್ಟ ತಲುಪಿತೆಂದರೆ,
ನಾಗಚಂದ್ರನಿಗೆ ಆಕೆ ತನ್ನನ್ನು ಗುರುವೆಂದು ಗೌರವಿಸುತ್ತಾಳೋ ಇಲ್ಲವೋ ಎಂಬ ಅನುಮಾನ ಮೂಡುತ್ತದೆ. ಅದನ್ನು
ಪರೀಕ್ಷಿಸಲು ಅವನು ಒಂದು ದಿನ ತಾನು ತೀರಿಕೊಂಡಂತೆ ಸುದ್ಧಿ ಹಬ್ಬಿಸುತ್ತಾನೆ. ತನ್ನ ನೆಚ್ಚಿನ ಗುರು
ತೀರಿಕೊಂಡ ಸಮಾಚಾರ ಕೇಳಿದ ಕಂತಿ ಅತಿ ದುಃಖದಿಂದ ಧಾವಿಸಿ ಬರುತ್ತಾಳೆ. ತನ್ನ ಗುರುವು ಹಾಸಿಗೆಯಲ್ಲಿ
ಮಲಗಿರುವುದನ್ನು ನೋಡಿ ಅದು ಅವನ ಹೆಣವೆಂದೇ ಭಾವಿಸಿಬಿಡುತ್ತಾಳೆ.
ತನ್ನ ಪ್ರೀತಿಯ ಗುರುವಿನ ಅಗಲಿಕೆಯನ್ನು ಸಹಿಸಲಾರದೇ ಕಂತಿ
ಒಮ್ಮೆಗೇ ತನ್ನ ದುಃಖವನ್ನು ಕವನಗಳ ಮೂಲಕ ಹೇಳತೊಡಗುತ್ತಾಳೆ. ಅವನಿಗಾಗಿಯೇ ಒಂದು ಕವನವನ್ನು ರಚಿಸಿ
ಅದರಲ್ಲಿ ಗುರುವಿನ ಅಕಾಲ ಮರಣದಿಂದ ಸಾಹಿತ್ಯಲೋಕಕ್ಕಾದ
ನಷ್ಟವನ್ನು ವರ್ಣಿಸುತ್ತಾಳೆ. ಶಿಷ್ಯೆಯ ಬಾಯಿಂದ ತನ್ನ ಪಾಂಡಿತ್ಯದ ವರ್ಣನೆ ಕೇಳುತ್ತಿದ್ದಂತೆಯೇ,
ಹಾಸಿಗೆಯಲ್ಲಿ ಸತ್ತಂತೆ ಮಲಗಿದ್ದ ಗುರುವು ಎದ್ದು ಕುಳಿತುಬಿಡುತ್ತಾನೆ! ಕಂತಿಯ ಆನಂದಕ್ಕೆ ಪಾರವೇ
ಇರುವುದಿಲ್ಲ.
ಈಗ ನಾವು ನಾಗಚಂದ್ರನು ಕಂತಿಯ ಕವಿತ್ವದ ಸಾಮರ್ಥ್ಯವನ್ನು ಪರೀಕ್ಷಿಸಲು
ಅವಳಿಗಾಗಿ ಕೊಟ್ಟ ಕೆಲವು ವಿಚಿತ್ರವೆನಿಸುವ ಒಗಟುಗಳನ್ನು ನೋಡೋಣ. ನನಗೆ ಕೇವಲ ಎರಡು ಒಗಟುಗಳಿಗೆ ಕಂತಿ
ನೀಡಿದ ಕವನ ಸ್ವರೂಪದ ಪೂರ್ಣ ಉತ್ತರಗಳು ನೆನಪಿಗೆ
ಬಂದಿವೆ. ಅಲ್ಲದೇ ಉಳಿದ ಕೆಲವಕ್ಕೆ ಅವಳು ರಚಿಸಿದ ಕವನಗಳು ನೆನಪಿಲ್ಲವಾದರೂ ಜಾಣ್ಮೆಯಿಂದ ಒಗಟನ್ನು
ಬಿಡಿಸಿದುದೂ ನೆನಪಿಗೆ ಬರುತ್ತಿದೆ:
ನಾಗಚಂದ್ರನ ಮೊದಲ ಒಗಟು -- ಸತ್ತವಳೆದ್ದು ತವರೂರಿಗೆ ಪೋಗುತಿರ್ದಳ್!
ಅಸಾಧ್ಯವೆನಿಸಿದ ಈ ಒಗಟಿಗೆ ಕಂತಿಯ ಉತ್ತರ:
ಅತ್ತೆಯ ಕಾಟವೂ ಅಧಿಕಂ, ಮತ್ತಿನ ಸವತಿಯರ ಕಾಟವು
ನಾದಿನಿ ಬೈವಳು, ಪೆತ್ತ ಮಕ್ಕಳ್ ಅಳಲ್ಕೆ
ಬೇಸತ್ತವಳೆದ್ದು ತವರೂರಿಗೆ ಪೋಗುತಿರ್ದಳ್!
ನಾಗಚಂದ್ರನ ಎರಡನೇ ಒಗಟು -- ಇಲಿಯಂ ಮುರಿಮುರಿದು ತಿನ್ನುತಿರ್ಪರ್!
ಅಸಾಧ್ಯವೆನಿಸಿದ ಈ ಒಗಟಿಗೆ ಕಂತಿಯ ಉತ್ತರ:
ಸರಸಿಜಾಕ್ಷಿಯರ ಹಸ್ತದೋಳ್ ತಿಲ ತೈಲದಿ ಮಾಳ್ಪ
ಚೆಕ್ಕಿಲಿಯಂ ಮುರಿಮುರಿದು ತಿನ್ನುತಿರ್ಪರ್!
ಇನ್ನೊಂದು ಅಸಾಧ್ಯವೆನಿಸುವ ಒಗಟು:
ದನಮಂ ಕಡಿಕಡಿದು ಬಸದಿಗೆಳೆಯುತಿರ್ದರ್!
ಕಂತಿಯ ಉತ್ತರ:
ಸಚ್ಛಂದನಮಂ ಕಡಿಕಡಿದು ಬಸದಿಗೆಳೆಯುತಿರ್ದರ್!
ಇನ್ನೊಂದು ಅಸಾಧ್ಯವೆನಿಸುವ ಒಗಟು:
ಇಸಮಂ ಸವಿಸವಿದು ತಿನ್ನುತಿರ್ಪರ್!
ಕಂತಿಯ ಉತ್ತರ:
ಪಾಯಿಸಮಂ ಸವಿಸವಿದು ತಿನ್ನುತಿರ್ಪರ್!
ಇನ್ನೊಂದು ಅಸಾಧ್ಯವೆನಿಸುವ ಒಗಟು:
ಗಜಮಂ ಕಟ್ಟಿ ಒಯ್ಯುತಿರ್ದರ್!
ಕಂತಿಯ ಉತ್ತರ:
ಕಾಗಜಮಂ ಕಟ್ಟಿ ಒಯ್ಯುತಿರ್ದರ್!
ದುರದೃಷ್ಟವೆಂದರೆ
ನಾನು ಈ ಮೊದಲೇ ಬರೆದಂತೆ ಅತ್ಯಂತ ಮೇಧಾವಿಯಾಗಿದ್ದ ಕಂತಿ ಬರೆದಳೆನ್ನಲಾದ ಯಾವುದೇ ಕವನಗಳು ನಮಗೆ ಲಭ್ಯವಾಗಿಲ್ಲ. ಆದರೆ ನಾಗಚಂದ್ರ-ಕಂತಿ ಎಂಬ ಗುರು-ಶಿಷ್ಯೆ ಜೋಡಿಯ ಕಥೆ,
ಕಂತಿಯ ಕವಿತ್ವದ ಸಾಮರ್ಥ್ಯವನ್ನು ನಮಗೆ ಹೇಳುತ್ತದೆ. ಈ ಅಪೂರ್ವ ಜೋಡಿಯ ಕಥೆಯು ಇಂದಿನ ತರುಣ ಕವಿಗಳಿಗೆ
ಮತ್ತು ಕವಯತ್ರಿಗಳಿಗೆ ಪ್ರೋತ್ಸಾಹದಾಯಕ ಮತ್ತು ಮಾದರಿಯಾಗಿದೆ.
--------------------ಮುಕ್ತಾಯ
-------------------------